Wednesday 17 April 2024

ನನಗೂ ಆತ್ಮ ಇದೆ..1

 ನನ್ನೊಳಗೂ ಒಂದು ಆತ್ಮವಿದೆ© ಡಾ.ಲಕ್ಷ್ಮೀ ಜಿ ಪ್ರಸಾದ 


 ನನ್ನ ‌ಮೇಲೆ ಬೇಕಾದರೆ ಮಾನನಷ್ಟ ಮೊಕದ್ದಮೆ ಹೂಡಲಿ,_5


ನಾನು ಆತ್ಮಕಥೆ ಬರೆಯಬೇಕು,ಅದನ್ನು ನಾನು ನಿವೃತ್ತಿ ಹೊಂದುವ ದಿನ ಪ್ರಕಟಿಸಬೇಕು ಎಂದು ಕೂಡ ಆಲೋಚಿಸುತ್ತಾ ಇದ್ದೆ‌.ಆದರೆ ಬರೆಯಲು ಶುರು ಮಾಡಿರಲಿಲ್ಲ ‌ನನ್ನ ಅಮ್ಮ ಈಗಲೇ ಶುರು ಮಾಡು .ನೆನಪಾದದ್ದನ್ನು ಬರೆದಿಡುತ್ತಾ ಹೋಗು..ಅರುವತ್ತು ಆದಾಗ ಬರೆಯಹೊರಟರೆ ನೆನಪಾಗದಿದ್ದರೆ ಏನು ಮಾಡುತ್ತೀಯಾ " ಎಂದು ಆಗಾಗ ಬರೆಯಲು ಶುರು ಮಾಡು ಎಂದು ನೆನಪಿಸುತ್ತಾ ಇದ್ದರು.ಅಮ್ಮನ ಹತ್ತಿರ ಹ್ಹೂ ಅಂತ ಹೋಗುಟ್ಟುದು ಮತ್ತೆ ಅಲ್ಲೇ ಮರೆತು ಬಿಡುದು‌.ಮತ್ತೆ ಅಮ್ಮ ನೆನಪು ಮಾಡುದು ಹೀಗೆ ನಡೆಯುತ್ತಾ ಇತ್ತು.

ಎರಡು ಮೂರು ದಿನಗಳ ಹಿಂದೆ ನಾವು ಸಂಸ್ಕೃತ ಎಂಎ ಓದುವಾಗ ಇದ್ದ ಸಹಪಾಠಗಳನ್ನೆಲ್ಲ ಮನೆಗೆ ಕರೆದು ಒಂದು ದಿನ ಗಮ್ಮತ್ತಿನಿಂದ ಬಹಳ ಖುಷಿಯಿಂದ ಕಳೆಯಬೇಕೆಂದು ಕೊಂಡೆ‌.ಕಳೆದ ತಿಂಗಳು ನಮ್ಮ ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ಮನೆ ಒಕ್ಕಲು ಬೇರೆ ಮುಹೂರ್ತ ಹತ್ತಿರದಲ್ಲಿ ಇಲ್ಲದ ಕಾರಣ  ತೀರಾ ಅರ್ಜೆಂಟಿನಲ್ಲಿ  ಫೆಬ್ರವರಿ ಹದಿನಾಲ್ಕಕ್ಕೆ ಇನ್ನೂ ಎಲ್ಲ ಮನೆ ಕೆಲಸ ಬಾಕಿ ಇರುವಂತೆಯೇ ಆಗಿತ್ತು.ಮುಂದೆ ಹಾಕುವ ಹಾಗಿರಲಿಲ್ಲ ಯಾಕೆಂದರೆ ತೀರಾ ಮುಂದೆ ತಗೊಂಡು ಹೋದರೆ ನನಗೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ,ಮೌಲ್ಯ ಮಾಪನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ,ಮೌಲ್ಯ ಮಾಪನ ಇಲೆಕ್ಷನ್ ಡ್ಯೂಟಿ ಎಲ್ಲ ಮುಗಿಯುವ ಹೊತ್ತಿಗೆ ಎಪ್ರಿಲ್ ಕಳೆದು ಬಿಡುತ್ತದೆ.ನಂತರ ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿ ಸಮಸ್ಯೆ ಆದರೆ ಎಂದು ಆತಂಕ. ಹಾಗಾಗಿ  ತೀರ ಅರ್ಜೆಂಟಿನಲ್ಲಿ ಮಾಡಿದ ಕಾರಣ ನನ್ನ ಹಳೆಯ ಸಹಪಾಠಿಗಳ ಪೋನ್ ನಂಬರ್ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ಮನೆ ಒಕ್ಕಲಿಗೆ ಆಹ್ವಾನಿಸಲಾಗಲಿಲ್ಲ.

ಈಗ. ಉಳಿದ. ಕೆಲಸಗಳು ಮುಗಿದಿವೆ.ಈ ಬಾರಿ ಇಲೆಕ್ಷನ್ ಡ್ಯೂಟಿ ತರಬೇತಿಗೆ ಬರಹೇಳಿದ್ದರೂ ಅಂತಿಮವಾಗಿ ಡ್ಯೂಟಿ ಹಾಕಿರಲಿಲ್ಲ .( ಸ್ವಲ್ಪ ಆರೋಗ್ಯ ಏರು ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ತರಬೇತಿಗೆ ನನಗೆ ಹಾಜರಾಗಲಿಲ್ಲ)

ಹಾಗಾಗಿ ಈಗ ಫ್ರೀ ಸಿಕ್ಕಿತ್ತು .ಹಾಗೆ ಹಳೆಯ ಸ್ನೇಹಿತರನ್ನು ಸಂಪರ್ಕಿಸಿ ನಮ್ಮ ಮನೆಗೆ ಬರಹೇಳಿ ಒಂದು ದಿನ ಅವರೊಂದಿಗೆ ಸಂತಸದಿಂದ ಕಳೆಯಬೇಕೆಂದು ಕೊಂಡಿದ್ದೆ .ಅದಕ್ಕಾಗಿ ಒಬ್ಬೊಬ್ಬರ ಫೋನ್ ನಂಬರ್ ಸಂಗ್ರಹಿಸುತ್ತಾ ಹೋದೆ.ಎಂಎ ಓದುವಾಗ ನನಗೆ ಪ್ರಿಯಳಾಗಿದ್ದ ವಿನುತಾರ ಫೋನ್ ನಂಬರ್ ಅನ್ನು ಮುರಳೀಧರ ಉಪಾಧ್ಯಾಯರ ಮೂಲಕ‌ ಪಡದೆ .

ವಿನುತಾ ಹತ್ತಿರ ಮಾತನಾಡಿ ಅವರಿಂದ ಸಂಸ್ಕೃತ ಓದುತ್ತಿದ್ದಾಗ ನನಗೆ ತುಂಬಾ ಸ್ನೇಹಿತೆಯಾಗಿದ್ದ ಕಮಲಾಯನಿ ಫೋನ್ ನಂಬರ್ ಸಿಕ್ಕಿತು. ಅವರಿಗೆ ಫೋನ್ ಮಾಡಿ ಸುಮಾರು ಹೊತ್ತು ಮಾತನಾಡಿದೆ.ಕೊನೆಯಲ್ಲಿ ಅವರು " ನನಗೆ ಒಂದು ವಿಷಯ ಮಾತ್ರ ಮರೆಯಲು ಆಗುತ್ತಾ ಇಲ್ಲ..ನಿನ್ನಿಂದಾಗಿ ನನಗೆ ಎಂಎ ಯಲ್ಲಿ ಕಡಿಮೆ ಅಂಕಗಳು ಬಂದವು " ಎಂದು ಬಹಳ ನೋವಿನಿಂದ ಹೇಳಿದರು..ನನಗೆ ಆಶ್ಛರ್ಯ ಆಯಿತು..ನನ್ನಿಂದಾಗಿ ಅವರಿಗೆ ಕಡಿಮೆ ಅಂಕ ಬರಲು ಹೇಗೆ ಸಾಧ್ಯ ? ನಾನು ಮಾಡಿದ ನೋಟ್ಸ್ ಗಳನ್ನು ನಾನು ಯಾರು ಕೇಳಿದರೂ ಕೊಡುತ್ತಿದ್ದೆ.ಕಮಲಾಯನಿ ಸೇರಿದಂತೆ ಎಲ್ಲರೂ ನೋಟ್ಸ್ ಅನ್ನು ಹಂಚಿಕೊಳ್ಳುತ್ತಿದ್ದರು

 ಮೊದಲ ವರ್ಷ ನಾನು ಕೂಡ ಬೇರೆಯವರು ಮಾಡಿದ ನೋಟ್ಸ್ ಗಳ ಸಹಾಯ ಪಡೆದಿದ್ದೆ.ಎರಡನೇ ವರ್ಷದ ಆರಂಭದಲ್ಲೇ  ಮೊದಲ ವರ್ಷದ ಫಲಿತಾಂಶ ಬಂದ ದಿನ ನಮ್ಮಲ್ಲಿ ಸಣ್ಣ ವಿವಾದ ಉಂಟಾಗಿತ್ತು.

ಮೊದಲ ವರ್ಷದ  ಪಾಠ ಪ್ರವಚನಗಳು ಮುಗಿದು ನಮಗೆ ರಿವಿಶನ್  ಹಾಲಿಡೇಸ್ ಕೊಟ್ಟಿದ್ದರು‌.ನಾನು ವೇದಾಂತವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದು ಆ ಬಗ್ಗೆ ಕೆಲವು ಸಂಶಯ ಉಂಟಾಗಿ ನಮಗೆ ವೇದಾಂತ ಪಾಠ ಮಾಡಿದ ಡಾ.ಕೆ ನಾರಾಯಣ ಭಟ್ ಅವರನ್ನು ಕಾಣಲು ಕಾಲೇಜಿಗೆ ಹೋದೆ.ಅವರು ಸ್ಟಾಫ್ ರೂಮಿನಲ್ಲಿ ಇದ್ದರು‌.ಇನ್ನೋರ್ವ ಉಪನ್ಯಾಸಕರಾದ ನಾಗರಾಜ ಭಟ್ ಕೂಡ ಅಲ್ಲಿಯೇ ಇದ್ದರು‌.ನಾನು  ಡಾ.ಕೆ ನಾರಾಯಣ ಭಟ್ಟರಲ್ಲಿ ಒಳಗೆ ಬರಬಹುದೇ ಎಂದು ಅನುಮತಿ ಕೇಳಿ,ಅವರು ಒಳಗೆ ಬರುವಂತೆ ಸೂಚಿಸಿದ ಮೇಲೆ ಒಳಗೆ ಹೋಗಿದ್ದೆ‌.ನನಗೆ ಉಂಟಾದ ಸಂಶಯ,ಅರ್ಥವಾಗದ ಭಾಗಗಳನ್ನು ಕೇಳಿದೆ‌.ಅವರು ಬಹಳ ತಾಳ್ಮೆಯಿಂದ ನನಗೆ ಅದನ್ನು ಹೇಳಿ ಕೊಡುತ್ತಾ ಇದ್ದರು.ಇದರ ನಡುವೆ ಅಲ್ಲಿಯೇ ಕುಳಿತಿದ್ದ ನಾಗರಾಜ ಎಂಬ ಉಪನ್ಯಾಸಕರು ಅವಿನಾಶ್ ಗೆ ತೊಂಬತ್ತು, ಗಜಾನನ ಮರಾಠೆಗೆ ಎಂಬತ್ತೈದು ,ರಮೇಶ್ ಗೆ ಎಂಬತ್ತು..ಇತ್ಯಾದಿಯಾಗಿ ಕೆಲವು ವಿದ್ಯಾರ್ಥಿಗಳಿಗೆ ಇಷ್ಟು ಅಂತರ್ ಮೌಲ್ಯ ಮಾಪನ ಅಂಕಗಳನ್ನು ನೀಡಿದ ಬಗ್ಗೆ ಡಾ.ಕೆ ನಾರಾಯಣ ಭಟ್ಟರಲ್ಲಿ ಹೇಳಿದರು.ಹುಡುಗಿಯರಿಗೆ ಕೊಟ್ಟ ಅಂಕಗಳ ಬಗ್ಗೆ ಇನ್ನೂ ಹೇಳಿರಲಿಲ್ಲ‌.ನನ್ನನ್ನು ನೋಡುತ್ತಾ ಲಕ್ಷ್ಮೀ ಗೆ ಎಪ್ಪತ್ತೆರಡು ಎಂದು ಹೇಳಿದರು. ಆಗ ನನಗೆ ತುಂಬಾ ಶಾಕ್ ಆಯ್ತು‌. ಕಿರು ಪರೀಕ್ಷೆ,ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ವಿಷಯಗಳಲ್ಲೂ ನಾನು ಟಾಪರ್ ಆಗಿದ್ದೆ.ಸೆಮಿನಾರ್ ಗಳಲ್ಲಿ ಕೂಡ ನನ್ನ ಪ್ರಬಂಧ ಮಂಡನೆ ಬಗ್ಗೆ ಉಪನ್ಯಾಸಕರು ಗುಡ್ ಎಂದು ಹೇಳಿ ಮೆಚ್ಚುಗೆ ಸೂಸಿದ್ದರು.ಹಾಗಿದ್ದರೂ ನನಗೇಕೆ ಉಳಿದವರಿಗಿಂತ ಕಡಿಮೆ ಅಂಕಗಳು. ನನ್ನ ಆತಂಕವನ್ನು ಗಮನಿಸಿದ ಡಾ.ಕೆ ನಾರಾಯಣ ಭಟ್ ಅವರು

ಲಕ್ಷ್ಮೀ ಗೆ ಯಾಕೆ ಅಷ್ಟು ಕಡಿಮೆ ಅಂಕಗಳು ಬಂದಿವೆ ,ಅವಳು ಪರೀಕ್ಷೆಗಳಲ್ಲಿ ,ಸೆಮಿನಾರ್ ಹಾಗೂ ಇತರ ನಾಟಕ ಭಾಷಣ ಮೊದಲಾದುದರಲ್ಲಿ ಕೂಡ ಮುಂದೆ ಇದ್ದಾಳಲ್ಲ ? ಎಂದು ಕೇಳಿದರು.ಅವಳು ಹೇಗೂ ಥಿಯರಿಯಲ್ಲಿ ಸ್ಕೋರ್ ಮಾಡುತ್ತಾಳೆ..ಇಂಟರ್ನಲ್ ಮಾರ್ಕ್ಸ್ ಕೊಡುವುದು  ಬಿಡುವುದು ನಮ್ಮ ಇಷ್ಟ ಅಲ್ವಾ ಎಂದವರು ಹೇಳಿದರು. ಆಗ ನಾನು ಅದೇಗೆ  ನಿಮ್ಮ ಇಷ್ಟ  ಆಗುತ್ತೆ ,ಮಿಡ್ ಟರ್ಮ್ ಮತ್ತು ಪ್ರಿಪರೇಟರಿ ಪರೀಕ್ಷೆಗಳಲ್ಲಿ  ನಾವು ತೆಗೆದ ಅಂಕಗಳು ,ಸೆಮಿನಾರ್ ಹಾಗೂ ಇತರ ಪಠ್ಯೇತರ ಚಟುವಟಿಗಳನ್ನು ಆಧರಿಸಿ ಕೊಡಬೇಕಲ್ಲ ? ಎಂದು ಕೇಳಿದೆ.ಬಹುಶಃ ಆತಂಕದಿಂದ ನನ್ನ ಧ್ವನಿ ಏರಿರಬಹುದೋ ಏನೋ ಗೊತ್ತಿಲ್ಲ ‌.ಸಣ್ಣ ವಯಸ್ಸಿನಲ್ಲಿ ನನಗೆ ಸ್ವಲ್ಪ ಶೀಘ್ರ ಕೋಪದ ಸ್ವಭಾವ ಇತ್ತು ಕೂಡ. ಆದರೆ ಶಾಲಾ ಕಾಲೇಜುಗಳಲ್ಲಿ ನಾನು ಅತ್ಯುತ್ಸಾಹದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇದ್ದ ವಿಧೇಯ ವಿದ್ಯಾರ್ಥಿನಿ ಆಗಿದ್ದೆ.ನಾನೆಂದೂ ಉಡಾಫೆ ವರ್ತನೆ ತೋರಿರಲಿಲ್ಲ ,ಆಗ ಕೂಡ ನಾನು ಅಷ್ಟೇ ಕೇಳಿದ್ದು.ಅಷ್ಟಕ್ಕೇ ಅವರು ನನಗೆ ಗೆಟೌಟ್ ಫ್ರಂ್ ಹಿಯರ್  ,ಇಂಟರ್ನಲ್ ಮಾರ್ಕ್ಸ್ ಬಗ್ಗೆ ಚರ್ಚಿಸುತ್ತಿರುವಾಗ ನೀನು ಬಂದದ್ದೇಕೆ ? ಎಂದು ಬಹಳ ಕೆಟ್ಟದಾಗಿ ಬೈದರು‌.ಆಗ ನಾನು ಡಾ.ಕೆ ನಾರಾಯಣ ಭಟ್ ಅವರ ಅನುಮತಿ ಕೇಳಿ ಒಳಗೆ ಬಂದಿದ್ದೆ..ಗೆಟೌಟ್ ಹೇಳಲು ನಿಮಗೇನು ಹಕ್ಕಿದೆ ಎಂದು ಹೇಳಿ ನೇರವಾಗಿ ಪ್ರಿನ್ಸಿಪಾಲ್ ಡಾ.ಜಿ ಎನ್ ಭಟ್ ಅವರಲ್ಲಿ ನಾಗರಾಜ ಅವರು ನನಗೆ ಅವಮಾನಿಸಿ ಮಾತನಾಡಿದ್ದನ್ನು ಮತ್ತು ಕಡಿಮೆ ಇಂಟರ್ನಲ್ ಮಾರ್ಕ್ಸ್ ಕೊಟ್ಟದ್ದನ್ನು ತಿಳಿಸಿದೆ.ಆಯಿತು ಈ ಬಗ್ಗೆ ನಾನು ವಿಚಾರಿಸುತ್ತೇನೆ.ಯುನಿವರ್ಸಿಟಿ ನಿಯಮದ ಪ್ರಕಾರ ಎಲ್ಲರಿಗೂ ಇಂಟರ್ನಲ್ ಮಾರ್ಕ್ಸ್ ಬರುತ್ತವೆ‌.ಇಷ್ಟು ಸಣ್ಣ ವಿಷಯಕ್ಕೆಲ್ಲ ಅಪ್ಸೆಟ್ ಆಗಬಾರದು ..ಹೋಗಿ ಓದಿಕೋ ಎಂದು ಹೇಳಿ ನನ್ನನ್ನು ಸಮಾಧಾನ ಮಾಡಿ ಕಳುಹಿಸಿದರು.ಅವರ ಮೇಲೆ ನನಗೆ ತುಂಬಾ ಗೌರವ ನಂಬಿಕೆ ಇತ್ತು.ಹಾಗಾಗಿ ಮನೆಗೆ ಹೋಗಿ ನೆಮ್ಮದಿಯಿಂದ ಓದಲು ಶುರು ಮಾಡಿದೆ.ಚೆನ್ನಾಗಿ ಓದಿದೆ ಕೂಡ. ದುರದೃಷ್ಟ ಏನೆಂದರೆ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಯ ಹಿಂದಿನ ಎರಡು ದಿನಗಳಿಂದ  ಮಲೇರಿಯಾ ಆಗಿ ತೀವ್ರ ಜ್ವರ.ಆಗ ಕಟೀಲಿನಲ್ಲಿ ಇದ್ದ ಡಾಕ್ಟರ್ ಶಶಿಕುಮಾರ್( ಹೆಸರು ಸರಿಯಾಗಿ ನೆನಪಿಲ್ಲ) ಬಳಿಗೆ ಹೋದೆ .ಅವರು ಸೂಕ್ತ ಚಿಕಿತ್ಸೆ ನೀಡಿದರಾದರೂ ತಕ್ಷಣವೇ ಗುಣವಾಗುವ ಖಾಯಿಲೆ ಇದಲ್ಲ..ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವುದು ಒಳ್ಳೆಯದು ಎಂದು ಹೇಳಿದರು.ಆಸ್ಪತ್ರೆಗೆ ದಾಖಲಾಗುವಷ್ಟು ದುಡ್ಡು ನಮ್ಮ ಹತ್ತಿರ ಇರಲಿಲ್ಲ ಜೊತೆಗೆ ಅಂತಿಮ ಪರೀಕ್ಷೆ ತಪ್ಪಿಸಿಕೊಂಡರೆ  ನನಗೆ ರ‍್ಯಾಂಕ್ ಬರುವ ಸಾಧ್ಯತೆ ಇರಲಿಲ್ಲ. ನಾನು ಮೊದಲ ರ‍್ಯಾಂಕ್ ತೆಗೆಯಬೇಕೆಂದು ತುಂಬಾ ಕಷ್ಟ ಪಟ್ಟು ಓದಿದ್ದೆ.

ಹಾಗಾಗಿ ಔಷಧ ತೆಗೆದುಕೊಂಡು ಪರೀಕ್ಷೆಗೆ ಹಾಜರಾದೆ.ಅದೃಷ್ಟವಶಾತ್ ಪರೀಕ್ಷೆ ಹಾಲಿನಲ್ಲಿ ‌ಮಲೇರಿಯಾದ ತೀವ್ರ ನಡುಕ ಕಾಣಿಸಿಕೊಳ್ಳಲಿಲ್ಲ.

ಪರೀಕ್ಷೆ ಮುಗಿಸಿ ಮನೆಗೆ ಹೋಗುವ ದಾರಿಯಲ್ಲಿ ತೀವ್ರ ನಡುಕ ಬಂದಿತ್ತು.ಸಾಮಾನ್ಯವಾಗಿ ‌ಮಲೇರಿಯ ಬಂದಾಗ ನಿಯಮಿತ ಸಮಯದಲ್ಲಿ ತೀವ್ರವಾದ ನಡುಕ ಉಂಟಾಗುತ್ತದೆ‌.ಮಲೇರಿಯಾ ನಿಯಂತ್ರಣಕ್ಕೆ ಬರುವ ತನಕ ಅದು ಮುಂದುವರಿಯುತ್ತದೆ.  ಮಲೇರಿಯಾಕ್ಕೆ ಕೊಡುವ ಔಷಧ ಲಿವರಿಗೆ ತೊಂದರೆ ಮಾಡುತ್ತದೆ‌ ಇದರಿಂದಾಗಿ ತುಂಬಾ ವಾಂತಿ ,ನಿಶಕ್ತಿ ಕಾಡುತ್ತದೆ ಜೊತೆಗೆ ನಡುಕದ ಪರಿಣಾಮವಾಗಿ   ತುಂಬಾ ಮೈ ಕೈ ನೋವು  .ಅಂತೂ ಮಲೇರಿಯಾ ಜೊತೆ ಸೆಣಸುತ್ತಲೇ ಪರೀಕ್ಷೆ ಎದುರಿಸಿದೆ‌.

ಮತ್ತೆ ಸ್ವಲ್ಪ ಸಮಯ ರಜೆ ಇತ್ತು..ಪ್ರಸಾದರಿಗೆ ಮಣಿಪಾಲ್ ಫೈನಾನ್ಸ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತು.. ನಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು‌‌. ನನ್ನ ಸೋದರಮಾವನ ವರಸೆಯ ರಾಮಣ್ಣು ಮಾವ ಅವರ ಪರಿಚಯದ ವಿಜಯಾ ಪೆನ್ ಮಾರ್ಟಿನ ಶ್ಯಾಮಣ್ಣ ಅವರಲ್ಲಿ ಮಾತಾಡಿ ಮಂಗಳೂರಿನಲ್ಲಿ ಸ್ವಲ್ಪ ಬಾಡಿಗೆ ಕಡಿಮೆ ಮಾಡಿಸಿ ಅವರ ಭಾವ ಮೈದನನ ಸುಸಜ್ಜಿತ ‌ಮನೆಯನ್ನು ನಮಗೆ ಬಾಡಿಗೆಗೆ ಕೊಡಿಸಿದರು ‌ ನಾವು ಎಕ್ಕಾರಿನ ಮೋಟು ಗೋಡೆಯ ಮಣ್ಣಿನ ಮನೆಯನ್ನು ಖಾಲಿ ಮಾಡಿ  ಕಷ್ಟಕಾಲದಲ್ಲಿ ನಮಗೆ ಆಶ್ರಯ ಕೊಟ್ಟ ಎಕ್ಕಾರಿನ ನಾಗವೇಣಿ ಅಮ್ಮ ಹಾಗೂ ಎಕ್ಕಾರಿನ ಕೊಂಕಣಿ ಅಜ್ಜನಿಗೆ ಧನ್ಯವಾದ ಹೇಳಿ ನಮಸ್ಕರಿಸಿ ಮಂಗಳೂರಿನ ವಿಜಯ ನಿವಾಸಕ್ಕೆ ಬಂದೆವು.ಇದು ಬಹಳ ಅದೃಷ್ಟ ಕೊಡುವ ಮನೆ ಎಂದು ಮನೆಯ ಓನರ್ ನ ತಮ್ಮನ ಮಡದಿ ಶೈಲಜಾ ನನಗೆ ಹೇಳಿದ್ದರು.ನಂತರ ನನಗೆ ಶೈಲಜಾ ತುಂಬಾ ಆತ್ಮೀಯರಾದರು‌


ಇತ್ತ ರಜೆ ಮುಗಿದು ಮತ್ತೆ ಕಾಲೇಜು ಶುರು ಆಯಿತು. ನಾವೆಲ್ಲ ಮೊದಲನೇ ವರ್ಷ ಎಂಎ ಇಂದ ಎರಡನೇ ವರ್ಷಕ್ಕೆ ಕಾಲಿಟ್ಟೆವು.ಇಲ್ಲಿ ಓದುತ್ತಾ ಇದ್ದ ನಾವೆಲ್ಲರೂ ಒಂದೇ ದೋಣಿಯ ಪಯಣಿಗರಾಗಿದ್ದೆವು.ಯಾರೂ ಕೂಡ ಶ್ರೀಮಂತರಾಗಿರಲಿಲ್ಲ‌..ನಾನಂತೂ ಮೊದಲ ವರ್ಷ ಎರಡು ಚೂಡಿದಾರ್ ,ಒಂದು ಸೀರೆಯಲ್ಲಿ ಕಳೆದಿದ್ದೆ.ಹೆಚ್ಚು ಕಡಿಮೆ ಎಲ್ಲರದೂ ನನ್ನದೇ ಪರಿಸ್ಥಿತಿ

ಒಂದು ಜೊತೆ ಚಪ್ಪಲಿ ಇಡೀವರ್ಷ ಬರುವಂತೆ ಜತನ ಮಾಡುತ್ತಿದ್ದೆವು.ಅದು ತುಂಡು ತುಂಡಾಗಿ ಹೊಲಿಗೆ ಹಾಕಿ ಹಾಕಿ ಇನ್ನು ಹೊಲಿಗೆ ಹಾಕಿ ಬಳಸಲು ಅಸಾಧ್ಯ ಎಂದಾದ ಮೇಲೂ ಅದನ್ನು ಎಳೆದು ಕೊಂಡು ಒಂದೆರಡು ವಾರ ನಡೆದೇ ಇನ್ನೊಂದು ಜೊತೆ ತೆಗೆದುಕೊಳ್ಳುತ್ತಿದ್ದೆವು‌.ಎಲ್ಲರೂ ಒಳ್ಳೆಯ ಅಂಕ ತೆಗೆದು ಒಳ್ಳೆಯ ಕೆಲಸ ಹಿಡಿಯಬೇಕೆಂಬ ಉದ್ದೇಶದಿಂದಲೇ ಓದಲು ಬಂದಿದ್ದೆವು.

ಎರಡನೇ ವರ್ಷದ ಪಾಠ ಪ್ರವಚನಗಳು ಆರಂಭವಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ನಮ್ಮ ಮೊದಲ ವರ್ಷದ ಫಲಿತಾಂಶ ಬಂತು..

ಯಾರಿಗೂ ಹೇಳುವಂತಹ ಒಳ್ಳೆಯ ಅಂಕಗಳು ಬಂದಿರಲಿಲ್ಲ ‌..ಅಳಿದೂರಲ್ಲಿ ಉಳಿದವನೇ ರಾಜ ಎಂಬಂತೆ ನಾನು ಮೊದಲ ಸ್ಥಾನ ಪಡೆದಿದ್ದೆ.ಅವಿನಾಶ್ ಎರಡನೇ ಸ್ಥಾನವನ್ನು ಪಡೆದಿದ್ದರು‌ ನನಗೂ ಅವರಿಗೂ ಆರೇಳು ಅಂಕಗಳ ಅಂತರ ಇತ್ತು‌.

ನನಗೆ 416/600 ಅಂಕಗಳು ಬಂದಿದ್ದವು.ಡಿಸ್ಟಿಂಕ್ಷನ್ ಗೆ ಇನ್ನೂ ನಾಲ್ಕು ಅಂಕಗಳು ಬೇಕಾಗಿದ್ದವು.ನಮಗೆಲ್ಲ ನಿರೀಕ್ಷೆಗಿಂತ ಕಡಿಮೆ  ಇಂಟರ್ನಲ್ ಮಾರ್ಕ್ಸ್ ಬಂದಿತ್ತು

. ನಮ್ಮ ಸೀನಿಯರ್ ಗಳಿಗೆ ನಮಗಿಂತ ಹೆಚ್ಚು ಅಂಕಗಳು ಬಂದಿದ್ದವು ಮತ್ತು ಅವರಿಗೆ ಇಂಟರ್ನಲ್ ಮಾರ್ಕ್ಸ್ ತುಂಬಾ ಜಾಸ್ತಿ ಕೊಟ್ಟಿದ್ದರು.ಅವರು ನಿಜವಾಗಿಯೂ ಅಷ್ಟು ಅಂಕಗಳನ್ನು ತೆಗೆಯುವಷ್ಟು ಜಾಣರಾಗಿದ್ದರೋ ಅಥವಾ ಒಳ್ಳೆಯ ಅಂಕಗಳು ಬರಲಿ ಎಂದು ನಿಯಮ ಮೀರಿ ಅವರಿಗೆ ಹೆಚ್ಚು ಇಂಟರ್ನಲ್ ಮಾರ್ಕ್ಸ್ ಕೊಟ್ಟಿದ್ದರೋ ಏನೋ ನಮಗೆ ಗೊತ್ತಿಲ್ಲ.

ನಾನು ಅಲ್ಲಿ ಸಂಸ್ಕೃತ ಎಂಎ ಗೆ ಸೇರುವಾಗ ಅಲ್ಲಿ ಸಂಸ್ಕೃತ ಕಾಲೇಜು ಶುರುವಾಗಿ ಎರಡು  ವರ್ಷ ಕಳೆದು ಮೂರನೇ ವರ್ಷಕ್ಕೆ ಕಾಲಿಟ್ಟಿತ್ತು ಅಷ್ಟೇ, ನಮ್ಮದು ಮೂರನೆಯ ಬ್ಯಾಚ್.ನಮಗಿಂತ ಮೊದಲು ಎರಡು ಬ್ಯಾಚ್ ಗಳು ಆಗಿದ್ದವು.ನಾನು ಸೇರುವಾಗ ಎರಡನೇ ಬ್ಯಾಚಿನ ಐದು ಜನ  ಎಂಎ ಎರಡನೇ ವರ್ಷದಲ್ಲಿ ಓದುತ್ತಾ ಇದ್ದರು‌.ಮೊದಲ ಬ್ಯಾಚಿನ ನಾಲ್ಕು ಜನರ ಎಂಎ ಓದು ಆಗಷ್ಟೇ ಮುಗಿದು ಫಲಿತಾಂಶ ಬರುವ ಮೊದಲೇ ಅವರಲ್ಲಿ ಇಬ್ಬರು  ಪದ್ಮನಾಭ ಮರಾಠೆ ಮತ್ತು ನಾಗರಾಜ್  ಅವರು ಅಲ್ಲಿಯೇ ಉಪನ್ಯಾಸಕರಾಗಿ ಸೇರಿಕೊಂಡಿದ್ದು ನಮಗೆ ಉಪನ್ಯಾಸಕರಾಗಿದ್ದರು‌.ಅದು ಅವರುಗಳ ಉಪನ್ಯಾಸ ವೃತ್ತಿಯ ಆರಂಭ ಆಗಿತ್ತು‌.ಆಗಷ್ಟೇ ಎಂಎ ಮುಗಿಸಿ ಉಪನ್ಯಾಸಕರಾದ  ಅವರಿಗೆ  ವೃತ್ತಿ ಅನುಭವ ಇರಲಿಲ್ಲ.

ಇರಲಿ.."ಮೊದಲ ಎರಡು ಬ್ಯಾಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಇಂಟರ್ನಲ್ ಮಾರ್ಕ್ಸ್ ಕೊಟ್ಟಿದ್ದು ನಮಗೆ ಕೊಟ್ಟಿಲ್ಲ ಅದರಿಂದಾಗಿ ನಮಗೆ ಕಡಿಮೆ ಅಂಕಗಳು ಬಂತು "ಎಂದು  ಉಪನ್ಯಾಸಕ ನಾಗರಾಜ್ ಅವರು ತರಗತಿಗೆ ಬಂದಾಗ ವಿದ್ಯಾರ್ಥಿಗಳೆಲ್ಲ ಗಲಾಟೆ ಮಾಡಿದರು..ಯಾಕೆಂದರೆ ಇಂಟರ್ನಲ್ ಮಾರ್ಕ್ಸ್ ಅವರು ಕೊಟ್ಟಿರ ಬೇಕು ಎಂದು ವಿದ್ಯಾರ್ಥಿಗಳು ಭಾವಿಸಿದ್ದರು‌‌.ನನಗೆ ನೂರರಲ್ಲಿ ಎಪ್ಪತ್ತೆರಡು ಅಂಕಗಳು ಇಂಟರ್ನಲ್ ಮಾರ್ಕ್ಸ್ ಬಂದಿತ್ತು.ಉಳಿದವರಿಗೆ ನನಗಿಂತ ಒಂದೆರೆಡು ಅಂಕಗಳು ಕಡಿಮೆ ಬಂದಿದ್ದವು‌.ಅದರಲ್ಲಿ ವಿಶೇಷ ಏನೂ ಇಲ್ಲ ಯಾಕೆಂದರೆ ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆ ,ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ,ಪ್ರಬಂಧ ಮಂಡನೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಇತರರಿಗಿಂತ ಮುಂದೆ ಇದ್ದೆ.

ನಮಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಕೊಟ್ಟ ಕಾರಣ ನಮಗ್ಯಾರಿಗೂ ಒಳ್ಳೆಯ ಅಂಕ ಬರಲಿಲ್ಲ ಎಂದು ವಿದ್ಯಾರ್ಥಿಗಳು ನಾಗರಾಜ್ ಅವರಲ್ಲಿ ಆಕ್ಷೇಪ ಮಾಡಿದಾಗ" ಅದೆಲ್ಲ ಲಕ್ಷ್ಮೀ ಯ ಅಧಿಕ ಪ್ರಸಂಗದಿಂದ ಆದದ್ದು "ಎಂದು  ಉಪನ್ಯಾಸಕರಾದ ನಾಗರಾಜ್ ಅವರು ಹೇಳಿದರು."ನಾನೇನು ಮಾಡಿದ್ದೇನೆ..ಎಲ್ಲಾ ಪರೀಕ್ಷೆ ಗಳಲ್ಲೂ ಹೈಯೆಸ್ಟ್ ಸ್ಕೋರ್ ಮಾಡಿರುವ ನನಗೆ ಉಳಿದವರಿಗಿಂತ ತುಂಬಾ ಕಡಿಮೆ ಯಾಕೆ ಕೊಟ್ಟಿದ್ದೀರಿ ಎಂದು ಕೇಳಿದ್ದು ತಪ್ಪಾ ?"ಎಂದು ಕೇಳಿದೆ ‌ಆಗ ವಿದ್ಯಾರ್ಥಿ ಗಳಲ್ಲಿ ಒಬ್ಬ( ಬಹುಶಃ ಗಜಾನನ ಮರಾಠೆ) 

ಕಳ್ಳ ತಾನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಳ್ಳುತ್ತಾನಾ ? ಎಂದು ನನ್ನನ್ನು ದೂಷಿಸಿ ಮಾತನಾಡಿದರು.ವಿದ್ಯಾರ್ಥಿಗಳೆಲ್ಲ ನನಗೆ ತಾಗುವಂತೆ ಹಂಗಿಸಿ ಮಾತನಾಡತೊಡಗಿದರು.ಆಗ ನಾನು ನಾಗಾರಾಜ್ ಅವರಲ್ಲಿ ಎರಡು ನಿಮಿಷ ಹೊರಗೆ ಹೋಗಿ ಬರಲು ಅನುಮತಿ ಕೇಳಿ ಹೊರಗೆ ಹೋದೆ.ಪ್ರಿನ್ಸಿಪಾಲ್ ಡಾ.ಜಿ ಎನ್ ಭಟ್ಟರಲ್ಲಿ‌ ಮತ್ತೆ ನಾಗರಾಜ್ ಅವರು "ಬೇರೆ ವಿದ್ಯಾರ್ಥಿಗಳಿಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಕೊಟ್ಟದ್ದಕ್ಕೆ ಲಕ್ಷ್ಮೀ ಯವರ ಅಧಿಕ ಪ್ರಸಂಗ ಕಾರಣ ಎಂದು ನನಗೆ ಅವಮಾನಿಸಿದ್ದಾರೆ.ಇಂಟರ್ನಲ್ ಮಾರ್ಕ್ಸ್ ಕೊಡಲು ಯುನಿವರ್ಸಿಟಿ ಸೂಚಿಸಿದ ಗೈಡ್ ಲೈನ್ ಗಳು‌ ಇವೆಯಲ್ಲ ಸರ್ ಅದರ ಪ್ರಕಾರ ತಾನೇ ಕೊಡಬೇಕು.. ನನಗೆ ಬರಬೇಕಾದಷ್ಟೇ ಅಂಕಗಳು ಬಂದಿವೆ .ಉಳಿದವರು ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ನನಗಿಂತ ಕಡಿಮೆ ಅಂಕಗಳನ್ನು ತೆಗೆದಿದ್ದಾರೆ.ಜೊತೆಗೆ ಸೆಮಿನಾರ್ ಗಳಲ್ಲಿ ನನಗೆ  ವೆರಿ ಗುಡ್ ಸಿಕ್ಕಿದೆ ಉಳಿದ ಯಾರಿಗೂ ಸಿಕ್ಕಿಲ್ಲ ,ಭಾಷಣ ನಾಟಕ ಸೇರಿದಂತೆ ಎಲ್ಲದರಲ್ಲೂ ನಾನು ಮುಂದಿದ್ದೆ  ಹಾಗಾಗಿ ನನಗಿಂತ ಕಡಿಮೆ ಅಂಕಗಳು ಉಳಿದವರಿಗೆ ಬಂದಿರುವುದು ಸಹಜ ತಾನೇ..ಅದಕ್ಕೆ ನಾನು ಕಾರಣ" ಎಂದು ಹೇಳಿ  ನಾಗರಾಜ್ ಅವರು ನನಗೆ ಅವಮಾನಿಸಿದ್ದು ನನಗೆ ತುಂಬಾ ನೋವಾಗಿದೆ "ಎಂದು ತಿಳಿಸಿದೆ.ಆಗ ಹಿರಿಯ ಉಪನ್ಯಾಸಕರಾದ ಡಾ.ಕೆ ನಾರಾಯಣ ಭಟ್ ಕೂಡ ಅಲ್ಲಿದ್ದರು.ನನ್ನ ಎದುರೇ ಡಾ.ಜಿ ಎನ್ ಭಟ್  ಅಟೆಂಡರ್ ಮೂಲಕ ನಾಗರಾಜರನ್ನು ಬರಹೇಳಿದರು.ಏನಿದು ನಾಗರಾಜ್ ಎಂದು‌ ಡಾ. ಜಿಎನ್ ಭಟ್ ಅವರು ಕೇಳಿದಾಗ  ಅವರು "sorry sirಏನೋ ಆಗೋಯ್ತು ಬಿಟ್ಟು ಬಿಡಿ ಸರ್ " ಎಂದು ಹೇಳಿದರು. ಓದಲೆಂದು ಬಂದ ಮಕ್ಕಳಿಗೆ ಕಿರುಕುಳ ಕೊಡಬಾರದು‌‌.ಇಂಟರ್ನಲ್ ಮಾರ್ಕ್ಸ್ ಅನ್ನು ಯುನಿವರ್ಸಿಟಿ ನಿಯಮಾವಳಿ ಪ್ರಕಾರ ಎಲ್ಲರಿಗೂ ಕೊಡಿ ಎಂದು ಆವತ್ತೇ ಹೇಳಿದೆನಲ್ಲ..ಹಾಗೆ ನೀಡಿಲ್ಲವೇ ?ಎಂದು ಡಾ.ಜಿ ಎನ್ ಭಟ್ ಕೇಳಿದಾಗ " ಯುನಿವರ್ಸಿಟಿ ನಿಯಮಾವಳಿ ಪ್ರಕಾರವೇ ನೀಡಿದ್ದೇವೆ ಸರ್ " ಎಂದು ನಾಗರಾಜ್ ಉತ್ತರಿಸಿದರು‌‌.ಮತ್ತೆ ಲಕ್ಷ್ಮೀ ಇಂದ ಮಾರ್ಕ್ಸ್ ಕಡಿಮೆ ಬಂತು ಎಂದು ಯಾಕೆ ಹೇಳಿದಿರಿ ? ಎಂದು ಕೇಳಿದಾಗ ನಾಗರಾಜ್ ಮತ್ತೆ ಪುನಃ ಏನೋ ಮಾತಿಗೆತಪ್ಪಿ ಬಂತು ಬಿಟ್ಟು ಬಿಡಿ ಸರ್" ಎಂದು ಹೇಳಿದರು."ಸರಿಯಮ್ಮ.. ನೀನು ಕ್ಲಾಸ್ ಗೆ ಹೋಗು ಇನ್ನು ಮುಂದೆ ಇಂತಹದ್ದು ಆಗದಂತೆ ನೋಡಿಕೊಳ್ಳುತ್ತೇನೆ " ಎಂದು ಹೇಳಿ ನನ್ನನ್ನು ಕ್ಲಾಸಿಗೆ ಕಳುಹಿಸಿದರು.ಆ ದಿನ ಸಂಜೆ ತನಕ ಎಂದಿನಂತೆ ತರಗತಿಗಳು ನಡೆದವು.ನಂತರ ನಾನು ಮನೆಗೆ ಬಂದೆ.

ಮರುದಿನ ನಾನು ತರಗತಿ ಪ್ರವೇಶ ಮಾಡುತ್ತಿದ್ದಂತೆ ಉಳಿದವರೆಲ್ಲ ಎದ್ದು ಹೊರನಡೆದರು..

ಅಂದಿನ ಮೊದಲ ತರಗತಿ ಡಾ‌ಕೆ ನಾರಾಯಣ ಭಟ್ ಅವರು ತೆಗೆದುಕೊಂಡರು‌.ತರಗತಿಯಲ್ಲಿ ನನ್ನ ಹೊರತಾಗಿ ಯಾರೂ ಇಲ್ಲದಿರುವುದನ್ನು ಗಮನಿಸಿ ಎಲ್ಲೋಗಿದ್ದಾರೆ ಇವರೆಲ್ಲ ಎಂದು ಕೇಳಿದರು‌ ಗೊತ್ತಿಲ್ಲ ಎಂದು ಹೇಳಿದೆ. ಅವರು ಎಂದಿನಂತೆ ಪಾಠ ಶುರು ಮಾಡಿದರು‌.ಡಾ ಕೆ ನಾರಾಯಣ ಭಟ್ ಅವರದು ಅಗಾಧ ಪಾಂಡಿತ್ಯ, ಕಂಚಿನ ಕಂಠ..ಅವರ ಪಾಠ ಕೇಳುವುದೊಂದು ಅವಿಸ್ಮರಣೀಯ ವಿಚಾರ‌.

ಸುಮಾರು ಅರ್ಧ ಗಂಟೆ ಕಳೆದಾಗ ಡಾ. ಜಿ ಎನ್ ಭಟ್ ನಾರಾಯಣ ಭಟ್ಟರನ್ನು ಪ್ರಿನ್ಸಿಪಾಲ್ ಚೇಂಬರ್ ಗೆ ಬರಹೇಳಿದರು..ನೀನು ನೋಟ್ಸ್ ಬರೀತಾ ಇರು ಏನೂಂತ ಕೇಳ್ಕೊಂಡು ಬರ್ತೇನೆ ಎಂದು ಹೇಳಿ ಹೋದರು.

ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಕೂಡ ಪ್ರಿನ್ಸಿಪಾಲ್ ಚೇಂಬರ್ ಗೆ ಬರಹೇಳಿದರು.ಪ್ರಿನ್ಸಿಪಾಲ್ ಚೇಂಬರ್ ಎದುರುಗಡೆ ನನ್ನ ಸಹಪಾಠಿಗಳು ಗಲಾಟೆ ಮಾಡುತ್ತಾ ಇದ್ದರು.ಆಗ ಇಬ್ಬರನ್ನು ಒಳ ಬರಲು ಹೇಳಿ ಡಾ.ಕಜಿ ಎನ್ ಭಟ್ ಅವರು  "ಏನು ಗಲಾಟೆ?  ನೀವ್ಯಾರೂ ಯಾಕೆ ಕ್ಲಾಸಿಗೆ ಹೋಗಿಲ್ಲ ?  ನಿನ್ನೆ ತರಗತಿಯಲ್ಲಿ ಏನಾಯಿತು? ಎಂದು ಕೇಳಿದರು.

ಆಗ ಅವರು "ನಿನ್ನೆ  ತರಗತಿಯಲ್ಲಿ  ನಾಗಾರಾಜ್ ಅವರು ಪಾಠ ಮಾಡುತ್ತಾ ಇದ್ದರು‌.ತರಗತಿಯಲ್ಲಿ ಏನೂ ಆಗಿರಲಿಲ್ಲ. ಲಕ್ಷ್ಮೀ ಅವರು ಇದ್ದಕ್ಕಿದ್ದಂತೆ ಎದ್ದು ಹೊರಗೆ ಹೋದರು.ಆಗ ಯಾಕೆ ಎಂದು ನಮಗೆ ಗೊತ್ತಾಗಲಿಲ್ಲ.ನಂತರ ನಮಗೆ " ಅವರು ನಮ್ಮ ನಾಗರಾಜ್ ಸರ್ ಮೇಲೆ ವಿನಾಕಾರಣ ದೂರು ಕೊಟ್ಟಿದ್ದಾರೆ ಎಂದು ಗೊತ್ತಾಯಿತು. ಅದಕ್ಕೆ ನಮಗೆ ಬಹಳ ಬೇಸರ ಆಗಿದೆ.ಅವರು ಕ್ಲಾಸಿಗೆ ಬಂದರೆ ನಾವು ಯಾರೂ ಕ್ಲಾಸಿಗೆ ಬರುವುದಿಲ್ಲ. ಅವರನ್ನು ಕಾಲೇಜಿನಿಂದ ತೆಗೆದು ಹಾಕಿ ಎಂದು ಹೇಳಿದರು ಹಾಗೆ ಬರೆದು ಕೊಡಿ ಎಂದು ಡಾ.ಕೆ ನಾರಾಯಣ ಭಟ್ ಅವರು ಹೇಳಿದರು..ಅದನ್ನು ಅವರಿಬ್ಬರು ಬರೆದು ಕೊಟ್ಟು ಸಹಿ ಹಾಕಿದ ರೆಂದು ನೆನಪು .ನಂತರ ಒಬ್ಬೊಬ್ಬರನ್ನಾಗಿ ಒಳ ಬರ ಹೇಳಿ " ನಿನ್ನೆ ತರಗತಿಯಲ್ಲಿ ಏನಾಯಿತು ? ಎಂದು ಕೇಳಿದರು.ಎಲ್ಲರದೂ ಒಂದೇ ಉತ್ತರ ..ತರಗತಿಯಲ್ಲಿ ಏನೂ ಆಗಿರಲಿಲ್ಲ ‌.ನಾಗರಾಜ್ ಸರ್ ಪಾಠ ಮಾಡುತ್ತಾ ಇದ್ದರು.ಲಕ್ಷ್ಮೀ ಇದ್ದಕ್ಕಿದ್ದ ಹಾಗೆ ಎದ್ದು ಹೊರಗೆ ಹೋದರು .ನಂತರ ನಾಗರಾಜ್ ಮೇಲೆ ಸುಮ್ಮನೇ ದೂರು ಕೊಟ್ಟಿದ್ದಾರೆ ಎಂದು ನಮಗೆ ತಿಳಿಯಿತು. ನಮಗೆ ತುಂಬಾ ಬೇಸರ ಆಗಿದೆ..ಅವರನ್ನು ಕಾಲೇಜಿನಿಂದ ಹೊರ ಹಾಕಿ ಎಂದು. ಆ ದಿವಸ ಕಮಲಾಯನಿ ಬಂದಿರಲಿಲ್ಲ ಎಂದು ಮೊನ್ನೆ ಅವರು ಮಾತಿನ ನಡುವೆ ಹೇಳಿದರು. ಅವರು ಬಂದಿದ್ದರೋ ಇಲ್ಲವೋ ಎಂದು ನನಗೂ ಗೊತ್ತಿಲ್ಲ,ಆದರೆ ನನಗೆ ತೀರಾ ಹತ್ತಿರ ಆಗಿದ್ದ ನೀತಾ ಕೂಡಾ ಅದೇ ಹೇಳಿಕೆ ನೀಡಿದ್ದಳು.

ಇದೆಲ್ಲ ಆದ ನಂತರ ಡಾ.ಕೆ ನಾರಾಯಣ ಭಟ್ ಅವರು " ನೀವುಗಳು ಹೇಳಿದ್ದು ಸರಿ  ಎಂದಾದರೆ ಲಕ್ಷ್ಮೀ ಯನ್ನು ಕಾಲೇಜಿನಿಂದ ತೆಗೆದು ಹಾಕುವುದಕ್ಕೆ ಅಡ್ಡಿ ಇಲ್ಲ.ಆದರೆ ನಿನ್ನೆ ನಾಗರಾಜ್ ಅನ್ನು ಪ್ರಿನ್ಸಿಪಾಲ್ ಕರೆಸಿದಾಗ ಅವರು ಏನೋ ಆಗೋಯ್ತು ಸರ್ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.ನೀವುಗಳು ಹೇಳುವಂತೆ ತರಗತಿಯಲ್ಲಿ ಏನೂ ನಡೆಯದೇ ಇದ್ದರೆ ಅವರು" ಏನೋ ಆಗೋಯ್ತು ಬಿಟ್ಟು ಬಿಡಿ ಎಂದದ್ದು ಏನನ್ನು ? ಏನೋ ಆಗೋಗಿದೆ ಎಂದವರೇ ಒಪ್ಪಿದ್ದಾರಲ್ಲ.ಒಬ್ಬ ಹುಡುಗಿ ಮೊದಲ ವರ್ಷ ತರಗತಿಗೆ ಮೊದಲ ಸ್ಥಾನ ಬಂದಿದ್ದಾಳೆ,ಕಲಿಕೆ ಮತ್ತು ಪಠ್ಯೇತರ ಎರಡೂ ವಿಚಾರಗಳಲ್ಲಿ ಮುಂದಿದ್ದಾಳೆ .ಅವಳಿಗೆ ಮುಂದೆ ರ‍‍್ಯಾಂಕ್ ಬರಬಹುದು ಎಂಬ ಹೊಟ್ಟೆ ಕಿಚ್ಚಿಗೆ ಅವಳ ಭವಿಷ್ಯವನ್ನು ಹಾಳು ಮಾಡಲು ಹೊರಟಿದ್ದೀರ? ಏನವಳನ್ನು ಸಾಯಿಸಬೇಕೆಂದಿದ್ದೀರ?ಇಷ್ಟು ಜನ ಸುಳ್ಳೇ ಸುಳ್ಳು ಹೇಳಿ ಸುಳ್ಳು ಹೇಳಿಕೆಗೆ  ಸಹಿ ಮಾಡಿದ್ದೀರಿ‌.ನೀವು ಇಷ್ಟೂ ಜನರನ್ನು ಕಾಲೇಜಿನಿಂದ ತೆಗೆದು ಹಾಕಲು ಈ ದಾಖಲೆ ಸಾಕು.ಲಕ್ಷ್ಮೀ ಒಬ್ಬಳು ಇದ್ದರೂ ನಮ್ಮ ಕಾಲೇಜು ನಡೆಯುತ್ತದೆ. ನೀವ್ಯಾರೂ ಬೇಕಾಗಿಲ್ಲ ಎಂದು ಜೋರು ಮಾಡಿದರು..ಎಲ್ಲರೂ ಕ್ಷಮೆ ಕೇಳಿ ಹೊರಗೆ ಬಂದರು.ತಲೆ ತಗ್ಗಿಸಿಕೊಂಡು ಬಂದು ತರಗತಿಯಲ್ಲಿ ಕುಳಿತರು.ಮತ್ತೆ ಎಂದಿನಂತೆ ತರಗತಿಗಳು ನಡೆದವು

ಮತ್ತೆ  ನಾನು ತರಗತಿ ಪರೀಕ್ಷೆ, ಮಧ್ಯಾವಧಿ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದೆ‌ .ಮೊದಲ ವರ್ಷಕ್ಕಿಂತ ತುಂಬಾ ಹೆಚ್ಚಿನ ಪರಿಶ್ರಮ ಪಟ್ಟೆ.ದಿವಸಕ್ಕೆ ಸುಮಾರು ಎಂಟು ಗಂಟೆ ಓದಿದೆ.

ಪೂರ್ವ ಸಿದ್ದತಾ ಪರೀಕ್ಷೆ ಸನ್ನಿಹಿತವಾಯಿತು.ಈಗೊಂದು ಸಮಸ್ಯೆ ಉಂಟಾಯಿತು. ನಾನು ಮದುವೆ ಆದ ನಂತರ ಸಂಸ್ಕೃತ ಎಂಎ ಓದಿದ್ದು.ನಾನು ಚೊಚ್ಚಲ ಗರ್ಭಿಣಿಯಾದೆ.ಬಸ್ ಪ್ರಯಾಣ ಮಾಡಬಾರದೆಂದು ವೈದ್ಯ ರು ಸೂಚಿಸಿದರು.ಜೊತೆಗೆ ತೀರಾ ವಾಂತಿ ಹಿಂಸೆ.

ನಾನು ಎಂಎ ಗೆ ಸೇರುವಾಗ ಡಾ.ಕೆ ನಾರಾಯಣ ಭಟ್ ಅವರು ನಮಗೆ ಸಂಬಂಧಿಕರೆಂದು ತಿಳಿದಿರಲಿಲ್ಲ.. ಈ ಮಕ್ಕಳು ಪ್ರತಿಭಟನೆ ಮಾಡಿದ್ದು ಇತ್ಯಾದಿಗಳು ನಡೆದ ನಂತರ ಯಾವುದೋ ಕಾರಣಕ್ಕೆ ನಾನು ಅವರ ಮನೆಗೆ ಹೋಗಿದ್ದೆ.ಆಗ ಅವರ ಮಡದಿ ಜಯಕ್ಕನವರ ಮೂಲಕ ನಾವು ಸಂಬಂಧಿಕರೆಂದು ಗೊತ್ತಾಗಿತ್ತು.ಅವರು  ಬಹಳ ಸಹೃದಯಿಗಳು,ನನ್ನ ಸೀನಿಯರ್ ಗಳಾಗಿದ್ದ ಎರಡು ಮೂರು ವಿದ್ಯಾರ್ಥಿನಿಯರಿಗೆ ಏನೋ ಸಮಸ್ಯೆ ಬಂದು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಾಗ ಇವರು ಅವರುಗಳಿಗೆ ಮೂರು ನಾಲ್ಕು ತಿಂಗಳ ಕಾಲ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದರು

ಹಾಗಾಗಿ ನನಗೂ ಒಂದು ವಾರ ಅವರ ಮನೆಯಲ್ಲಿ ಆಶ್ರಯ ನೀಡಿಯಾರು ಎಂಬ ನಂಬಿಕೆಯಲ್ಲಿ ಅವರಿಗೆ ವಿಷಯ ತಿಳಿಸಿ ಸಹಾಯ ಕೇಳಿದೆ.ತುಂಬು ಮನಸಿನಿಂದ ಒಂದು ವಾರ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟರು.ಪೂರ್ವ ಸಿದ್ಧತಾ ಪರೀಕ್ಷೆ ಆರಂಭವಾಗುವ ಹಿಂದಿನ ದಿನ ಕಾರಿನಲ್ಲಿ ಅವರ ಮನೆಗೆ ತಂದು ಬಿಟ್ಟು ಪ್ರಸಾದ್ ಹಿಂದೆ  ಹೋದರು..ಐದು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬರೆದು ಮತ್ತೆ ನಾರಾಯಾಣ ಭಟ್ ದಂಪತಿಗಳ ಕಾಲು ಹಿಡಿದು  ನಮಸ್ಕರಿಸಿಸ ಧನ್ಯವಾದ ಹೇಳಿ ಕಾರಿನಲ್ಲಿ ಮನೆಗೆ ಬಂದೆ.

ಮತ್ತೆ ಒಂದು ಒಂದೂವರೆ ತಿಂಗಳು ಕಳೆದು ಎರಡನೇ ವರ್ಷದ ಸಂಸ್ಕೃತ ಎಂಎಯ ಅಂತಿಮ ಪರೀಕ್ಷೆಗಳು ಶುರುವಾದವು..ನಾನು ರ‍್ಯಾಂಕ್ ತೆಗೆಯಲೇ ಬೇಕೆಂದು ಹಠ ಕಟ್ಟಿ ಓದಿದ್ದೆ. ನನ್ನ  ದುರದೃಷ್ಟ ಇಲ್ಲಿಗೆ ನಿಲ್ಲಲಿಲ್ಲ ಮರು ದಿನ ಪರೀಕ್ಷೆ ಎನ್ನುವಾಗ  ಹಿಂದಿನ ದಿನ ಮಧ್ಯಾಹ್ನದ ಹೊತ್ತಿಗೆ ಕಿಬ್ಬೊಟ್ಟೆಯ ಲ್ಲಿ ಜೋರು ಹೊಟ್ಟೆ ನೋವು ಶುರು ಆಯಿತು.ಆಗ ನಾನು ನಾಲ್ಕು ತಿಂಗಳ ಗರ್ಭಿಣಿ.ವಾಂತಿ ಹಿಂಸೆ ನಿಂತು ಸುಧಾರಿಸಿದ್ದೆ.ಅಮ್ಮಾ ಎಂದು ಕರೆಯುವ ಕಂದನ ಕನಸನ್ನು ಕಾಣುತ್ತಿದ್ದೆ.

ಮರುದಿನ ಪರೀಕ್ಷೆ ಇದೆ ಎಂದಾಗ ಕಾಡಿದ ಹೊಟ್ಟೆ ನೋವು ಆತಂಕವನ್ನು ಉಂಟು ಮಾಡಿತ್ತು.ಹೊಟ್ಟೆ ನೋವು ಜೋರಾದಾಗ ನಾನು ಚಿಕಿತ್ಸೆ ಪಡೆಯುವ ಗೈನಕಾಲಜಿಷ್ಟ್ ಡಾ.ಮಾಲತಿ ಭಟ್ ಅವರ ಭಟ್ಸ್ ನರ್ಸಿಂಗ್ ಹೋಮಿಗೆ ಹೋದೆ.ಅವರು ಪರೀಕ್ಷಿಸಿ ರಕ್ತಸ್ರಾವ ಆಗಿಲ್ಲ ಎಂಬುದನ್ನು ದೃಢ ಮಾಡಿ ಏನಾಗಲಾರದು..ಏನಾದರೂ ಗ್ಯಾಸ್ಟ್ರಿಕ್‌ ಇರಬಹುದು ಅದಕ್ಕೆ ಔಷಧ ಕೊಡುತ್ತೇನೆ, ಸಣ್ಣ ಪ್ರಮಾಣದ ನೋವು ನಿವಾರಕ ಕೊಡುತ್ತೇನೆ ಹೆಚ್ಚು ಪವರ್ ನದ್ದು ಕೊಟ್ಟರೆ ಮಗುವಿಗೆ ತೊಂದರೆ ಆಗಬಹುದು, ಪರೀಕ್ಷೆ ಅಂತ ಹೆಚ್ಚು ಓದುವುದು ಬೇಡ,ರೆಸ್ಟ್ ತಗೊಳ್ಳಿ ಎಂದು ಹೇಳಿದರು.

ಹೊಟ್ಟೆ ನೋವು ಸ್ವಲ್ಪ ಕಡಿಮೆ ಆದ ಹಾಗೆ ಅನಿಸಿತು.ವೈದರ ಸೂಚನೆಯಂತೆ ಬಂದು ಮಲಗಿದ್ದೆ.ಆದರೆ ರಾತ್ರಿ ಎಂಟು ಗಂಟೆ ಹೊತ್ತಿಗೆ ತಡೆಯಲಾರದ ಹೊಟ್ಟೆ ನೋವು ಶುರು ಆಯಿತು. ಮತ್ತೆ ವೈದ್ಯರ ಬಳಿಗೆ ಹೋದೆ.ಅಲ್ಲಿಗೆ ತಲುಪುವವಷ್ಟರಲ್ಲಿ ಬಟ್ಟೆ ಎಲ್ಲ ಕೆಂಪಾಗಿತ್ತು.ರಕ್ತ ಸ್ರಾವ ಆಗಿ ಗಾಭರಿ ಆಗಿತ್ತು..ಅವರು ನೋಡುತ್ತಲೇ ಗರ್ಭಪಾತ ಆಗಿದೆ ಆದರೂ ಸ್ಕಾನಿಂಗ್ ಮಾಡಿ ನೊಡುವ ಎಂದು ಸ್ಕಾನಿಂಗ್ ಗೆ ಕಳುಹಿಸಿದರು.ಅಲ್ಲಿ ಗರ್ಭ ಹೋಗಿದೆ ಎಂದು ಸ್ಪಷ್ಟವಾಗಿ ತಿಳಿಯಿತು .ಅಳು ಸಂಕಟ ಉಕ್ಕಿ ಹರಿಯಿತು. ಮತ್ತೆ ಡಾ.ಮಾಲತಿ ಭಟ್  ಅವರ ಬಳಿಗೆ ಬಂದೆ. ಅವರು D&C ಮಾಡಬೇಕು ಇಲ್ಲವಾದಲ್ಲಿ ಗರ್ಭ ಕೋಶಕ್ಕೆ ಇನ್ಫೆಕ್ಷನ್ ಆಗಿ ಮುಂದೆ ಮಕ್ಕಳಾಗುವುದು ಕಷ್ಟ ಆಗ ಬಹುದು ಎಂದರು..ಈಗಲೇ D&C ಮಾಡುತ್ತೇನೆ ಒಂದು ದಿವಸ ಅಡ್ಮಿಟ್ ಆಗಿ ಇರಬೇಕು ಎಂದರು.

ಆಗ ನಾನು "ನಾಳೆ ಪರೀಕ್ಷೆಗೆ ಹೋಗದಿದ್ದರೆ ಒಂದು ವರ್ಷ ವ್ಯರ್ಥವಾಗಿ ಹೋಗುತ್ತದೆ.ನನಗೆ ರ‍‍್ಯಾಂಕ್ ತಪ್ಪಿ ಹೋಗುತ್ತದೆ "ಎಂದು ಅಳುತ್ತಾ ಹೇಳಿದೆ.ಸರಿ,ನಾಳೆ ಪರೀಕ್ಷೆ ಮುಗಿಸಿ ಬಾ.ಹೊಟ್ಟೆ ನೋವಿಗೆ ಹೈ ಪವರ್ ಪೈನ್  ಕಿಲ್ಲರ್ ಕೊಡುತ್ತೇನೆ.ಆದರೆ ತುಂಬಾ ರಕ್ತಸ್ರಾವ ಆಗುತ್ತದೆ.ಆವಾಗ ಸುಸ್ತಾಗಿ ತಲೆ ತಿರುಗಬಹುದು.ಅದಕ್ಕಾಗಿ ಆಗಾಗ ಜ್ಯೂಸ್ ಹಣ್ಣು ತೆಗೆದುಕೊಳ್ಳಬೇಕು.ಇನ್ನು ಗರ್ಭ ಹೋದ ಬಗ್ಗೆ ಚಿಂತೆ ಮಾಮರುದಿವಸಡಬೇಡ.ಆರು ತಿಂಗಳು ಕಳೀಲಿ ಅಷ್ಟರ ತನಕ ಜಾಗ್ರತೆ ಮಾಡಿ ಗರ್ಭ ಧರಿಸಬಾರದು.ನಂತರ ಒಂದು ವರ್ಷದಲ್ಲಿ ಮುದ್ದಾದ ಮಗುವನ್ನು ನಿನ್ನ ಹೊಟ್ಟೆಯಿಂದ ತೆಗೆದು ನಿನ್ನ ಕೈಗೆ ಕೊಡುತ್ತೇನೆ ಖಂಡಿತಾ, ಕಣ್ಣೊರೆಸಿಕೋ,ಮನೆಗೆ ಹೋಗಿ ನಾಳೆಯ ಪರೀಕ್ಷೆಗೆ ತಯಾರಿ ಮಾಡಿಕೋ.ಮೊದಲ ರ‌್ಯಾಂಕ್ ನಿನಗೇ ಬರಲಿ ಎಂದು ಹಾರೈಸಿ ನನ್ನ ಬೆನ್ನು ತಟ್ಟಿ ಕಳುಹಿಸಿದರು.

ಮನೆಗೆ ಅಳುತ್ತಾ ಬಂದೆ. ಆದರೆ ಓದಲು ಪುಸ್ತಕ ಹಿಡಿದಾಗ ಜಗತ್ತನ್ನೇ ಮರೆತೆ.

 ಎರಡು ಮೂರು ದಪ್ಪದ ಸ್ಯಾನಿಟರಿ ಪ್ಯಾಡ್ ಕಟ್ಟಿ ಕೊಡು ಕೆಂಪು ಡ್ರೆಸ್ ಹಾಕಿಕೊಂಡು ಪರೀಕ್ಷೆ ಬರೆಯಲು ಹೊರಟೆ.ಅಕಸ್ಮಾತ್  ಬ್ಲಡ್ ಲೀಕ್ ಆದರೆ ಪಕ್ಕನೆ ಗೊತ್ತಾಗದಿರಲಿ ಎಂದು ಕೆಂಪು ಚೂಡಿದಾರ್ ಹಾಕಿಕೊಂಡಿದ್ದೆ.

 ಒಂದೆಡೆ ತಡೆಯಲಾಗದ ಹೊಟ್ಟೆ ನೋವು, ಇನ್ನೊಂದೆಡೆ ತೀವ್ರ ರಕ್ತಸ್ರಾವ,  ಹೊಟ್ಟೆಯಲ್ಲಿದ್ದ ಕಂದನನ್ನು ಕಳೆದು ಕೊಂಡ ದುಃಖ, ಸುಸ್ತು  ಹೇಗೆ ಪರೀಕ್ಷೆ ಬರೆಯುವೆನೋ ಎಂದು ನನಗೂ ಗೊತ್ತಿರಲಿಲ್ಲ.. ಏನೋ ಒಂದು ಹುಚ್ಚು ಧೈರ್ಯ ಮಾಡಿ ಪರೀಕ್ಷೆಗೆ ಬರೆಯಲು ಬಂದಿದ್ದೆ..ಸುಸ್ತು ,ದುಃಖ ಆತಂಕದಿಂದ ಕೈಕಾಲುಗಳು ನಡುಗುತ್ತಿದ್ದವು 

ಹೇಗೋ ಕಾಲಳೆದುಕೊಂಡು 

ಪರೀಕ್ಷೆ ಹಾಲಿಗೆ ಹೋದೆ,ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮೇಲೆ ಜಗತ್ತನ್ನೇ ಮರೆತು ಉತ್ತರ ಬರೆದೆ.

ಪರೀಕ್ಷೆ ಮುಗಿಯುವಷ್ಟರಲ್ಲಿ ಬಟ್ಟೆ ಎಲ್ಲ ಒದ್ದೆಯಾಗಿ ಕೆಂಪಾಗಿತ್ತು.ಶಾಲು ಅಡ್ಡ ಹಾಕಿ ಹೇಗೋ ಹೊರಗೆ ಬಂದೆ.ಪ್ರಸಾದ್ ಕಾರಿನೊಂದಿಗೆ ಕಾಯುತ್ತಾ ಇದ್ದರು.ನೇರವಾಗಿ ಆಸ್ಪತ್ರೆಗೆ ಹೋಗಿ ದಾಖಲಾದೆ‌.D&Cಮಾಡಿದರು.ತುಂಬಾ ರಕ್ತ ಸ್ರಾವ ಅದ ಕಾರಣ ಬ್ಲಡ್ ಕೊಡಬೇಕಾಯಿತು ಅದೃಷ್ಟಕ್ಕೆ ನಂತರದ ಪರೀಕ್ಷೆಗೆ ಎರಡು ದಿನ ಸಮಯ ಇತ್ತು.

ಅಂತೂ ಇಂತೂ ಎಲ್ಲಾ ಪರೀಕ್ಷೆಗಳನ್ನು ತುಂಬಾ ಚೆನ್ನಾಗಿ ಬರೆದೆ.ಪರಿಶ್ರಮ ವ್ಯರ್ಥವಾಗಲಿಲ್ಲ.ಎರಡನೇ ವರ್ಷ ನನಗೆ ಇಂಟರ್ನಲ್ ಮಾರ್ಕ್ಸ್ ಇತರರಿಗಿಂತ ಕಡಿಮೆ ಕೊಟ್ಟಿದ್ದರು.ಆದರೂ ಎರಡನೇ ಸ್ಥಾನ ಪಡೆದ ಗಜಾನನ ಮರಾಠೆಗಿಂತ ಸುಮಾರು ಮೂವತ್ತು ಮಾರ್ಕ್ಸ್ ಹೆಚ್ಚು ಪಡೆದು ಫಸ್ಟ್‌ ರ‍್ಯಾಂಕ್ ಗಳಿಸಿದ್ದೆ.

ಇದಿಷ್ಟು ನಡೆದ ಘಟನೆ.ಮೊನ್ನೆ ಮಾತಾಡುವಾಗ ಕಮಲಾಯನಿಗೆ ಇಂಟರ್ನಲ್ ಮಾರ್ಕ್ಸ್ ತುಂಬಾ ಕಡಿಮೆ ಬಂದಿತ್ತು ಎಂದು ಹೇಳಿದರು.ಆಶ್ಚರ್ಯ ಆಯಿತು‌  ಮೊದಲ ವರ್ಷ ನನಗೆ ಹೈಯೆಸ್ಟ್ ಇಂಟರ್ನಲ್ ಮಾರ್ಕ್ಸ್ ಇದ್ದರೂ ಉಳಿದವರಿಗೆ ನನಗಿಂತ ಒಂದೆರಡು ಅಂಕಗಳು ಮಾತ್ರ ಕಡಿಮೆ ಬಂದಿದ್ದವು.ಕಮಲಾಯನಿಗೆ ತುಂಬಾ ಕಡಿಮೆ ಹೇಗೆ ಬಂತು? ನಂತರ ವಿಷಯ ತಿಳಿಯಿತು. ಅವರಿಗೇನೋ ಸಮಸ್ಯೆ ಆಗಿ ಅವರು ಮೊದಲ ವರ್ಷ ಮಧ್ಯವಾರ್ಷಿಕ ಅಥವಾ ಪೂರ್ವ ಸಿದ್ಧತಾ ಪರೀಕ್ಷೆ ಗಳಿಗೆ ಬಂದಿರಲಿಲ್ಲ ‌ಎಂಎ ಯಲ್ಲಿ ಪ್ರತಿ ವಿಷಯಕ್ಕೆ ಇಪ್ಪತ್ತು ಅಂಕಗಳು ಇಂಟರ್ನಲ್ ಮಾರ್ಕ್ಸ್ ಇರುತ್ತವೆ.ಅದರಲ್ಲಿ ಹತ್ತು ಅಂಕಗಳನ್ನು ಮಧ್ಯವಾರ್ಷಿಕ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ತೆಗೆದ ಅಂಕಗಳನ್ನು ಟೋಟಲ್ ಮಾಡಿ ಅದನ್ನು ಹತ್ತರಲ್ಲಿ ಮಾಡಿ ಕೊಡುತ್ತಾರೆ. ಉಳಿದ ಹತ್ತು ಅಂಕಗಳನ್ನು ಪ್ರಬಂಧ ಮಂಡನೆ ಮತ್ತು ಪಠ್ಯೇತರ ಚಟುವಟಿಗಳ ಆಧಾರದಲ್ಲಿ ಕೊಡುತ್ತಾರೆ.ಒಂದು ಪರೀಕ್ಷೆ ಗೆ ಹಾಜರಾಗದಿದ್ದರೆ ಐದು ಅಂಕಗಳು ಹೋಗುತ್ತವೆ.ಇನ್ನುಳಿದ ಐದು ಅಂಕ ಕೂಡ ಪೂರ್ಣವಾಗಿ ಸಿಗುವುದಿಲ್ಲ ಹಾಜರಾದ ಪರೀಕ್ಷೆ ಯಲ್ಲಿ ಅರುವತ್ತು ಶೇಕಡಾ ಅಂಕ‌ಇದ್ದರೆ ಆ ಐದರಲ್ಲಿ ಮೂರು ಅಂಕ ಮಾತ್ರ ಸಿಗುತ್ತದೆ.ಪ್ರಬಂಧ ಮಂಡನೆ ಮತ್ತು ಇತರ  ಪಠ್ಯೇತರ ಚಟುವಟಿಕೆಗಳಿಗೆ ಆರರಿಂದ ಎಂಟು ಅಂಕ ನೀಡುತ್ತಾರೆ‌ ಹೀಗೆ ಐದೂ ಪತ್ರಿಕೆಗಳಲ್ಲಿ ಐದು ಅಂಕಗಳು ಹೋದಾಗ ಇಪ್ಪತ್ತೈದು ಅಂಕಗಳು ಕಡಿಮೆ ಆಗುತ್ತವೆ.ಮೊದಲ ವರ್ಷ ಕಮಲಾಯನಿ ಮತ್ತು ಎರಡನೇ ವರ್ಷ ನೀತಾ ನಾಯಕ್ ಮಧ್ಯಾವಧಿ ಅಥವಾ ಪೂರ್ವ ಸಿದ್ದತಾ ಪರೀಕ್ಷೆಗಳಿಗೆ ಹಾಜರಾಗಿಲ್ಲ ಇದರಿಂದಾಗಿ ಅವರುಗಳಿಗೆ ಉಳಿದವರಿಗಿಂತ‌ ಇಪ್ಪತ್ತೈದು ಇಂಟರ್ನಲ್ ಮಾರ್ಕ್ಸ್ ಕಡಿಮೆ ಬಂದಿರಬಹುದು.

ಆದರೆ ಇದಕ್ಕೊಂದು ಪರಿಹಾರವಿದೆ .ಸಕಾರಣ ಕೊಟ್ಟು ಮರು ಪರೀಕ್ಷೆ ಮಾಡುವಂತೆ ವಿನಂತಿ ಮಾಡಿದರೆ ಮರು ಪರೀಕ್ಷೆ ಮಾಡುತ್ತಾರೆ‌.ಆಗ ಇತರರಷ್ಟೇ ಅಂಕಗಳು ಸಿಗುತ್ತವೆ. ನಾನು ಉಜಿರೆಯಲ್ಲಿ ಎರಡನೇ ವರ್ಷ ಬಿಎಸ್ಸಿ ಪದವಿ ಓದುತ್ತಿರುವಾಗ ನನಗೆ ಮದುವೆ ಆಯಿತು.ನನ್ನ ಮದುವೆ ಹಿಂದಿನ ದಿನ ತನಕ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದವು .ಮದುವೆಯ ಹಿಂದಿನ ದಿನ ಇಂಗ್ಲಿಷ್ ಪರೀಕ್ಷೆ ಇತ್ತು.ಮದುವೆ ಹಿಂದಿನ ದಿನ ತನಕದ ಪರೀಕ್ಷೆಗಳನ್ನು ನಾನು ಬರೆದಿದ್ದೆ.ಮದುವೆ ಹಿಂದಿನ ದಿನ ಬೆಳಗ್ಗೆಯೇ ಊರಿಗೆ ಹೋಗುವುದು ಅನಿವಾರ್ಯವಗಿತ್ತು‌.ಉಜಿರೆಯಿಂದ ನಮ್ಮ ‌ಮನೆಗೆ ನಾಲ್ಕು ಗಂಟೆ ಪ್ರಯಾಣದ ದೂರವಿತ್ತು.ಹಾಗಾಗಿ ಆ ಪರೀಕ್ಷೆಯನ್ನು ಕೂಡ ಬರೆದು ಮತ್ತೆ ಊರಿಗೆ ಹೋಗಲು ಸಾಧ್ಯವಿರಲಿಲ್ಲ. ಅದ್ದರಿಂದ ನಾನು  ಎರಡು ದಿನ ಮೊದಲೇ ನಮ್ಮ ಇಂಗ್ಲಿಷ್ ಉಪನ್ಯಾಸಕರಾದ ವೆಂಕಪ್ಪಯ್ಯ ಅವರಿಗೆ ಮದುವೆ ಆಹ್ವಾನ ಪತ್ರಿಕೆ ಕೊಟ್ಟು ಮದುವೆಗೆ ಬನ್ನಿ ಎಂದು ಆಹ್ವಾನಿಸಿ,ನನಗೆ ಇಂಗ್ಲಿಷ್ ಪರೀಕ್ಷೆ ಬರೆಯಲು ಆಗುತ್ತಿಲ್ಲ,ಮದುವೆಯಾದ ನಂತರ ಕಾಲೇಜಿಗೆ ಬರುತ್ತೇನೆ ನಂತರ ನನಗೆ ಮರು ಪರೀಕ್ಷೆ ಮಾಡಿ ಎಂದು ವಿನಂತಿಸಿದ್ದೆ.ಆಯಿತಮ್ಮ ಹೋಗಿ ಬಾ ಶುಭವಾಗಲಿ ಎಂದು ಹಾರೈಸಿ ನನ್ನನ್ನು ಕಳುಹಿಸಿದ್ದರು.  ಮದುವೆ ಕಳೆದು ವಾರ ಬಿಟ್ಟು ಕಾಲಲೇಜಿಗೆ ಬಂದಾಗ ಮರು ಪರೀಕ್ಷೆ ಮಾಡಿದ್ದರು. ಇಲ್ಲಿ ಕೂಡ ಇವರಿಬ್ಬರೂ ನನ್ನಂತೆಯೇ ಸಕಾರಣ ನೀಡಿ ಮರು ಪರೀಕ್ಷೆ ಮಾಡುವಂತೆ ಡಾ.ಜಿ ಎನ್ ಭಟ್ ಅವರಲ್ಲಿ ವಿನಂತಿಸಿದ್ದರೆ ಅವರು ಖಂಡಿವಾಗಿಯೂ ಮರು ಪರೀಕ್ಷೆ ಮಾಡುತ್ತಿದ್ದರು ‌ಇವರುಗಳು ಈ ಬಗ್ಗೆ ನಾಗರಾಜ್ ಅವರಲ್ಲಿ ಮಾತನಾಡಿರಬೇಕು.ಆಗಷ್ಟೇ ಎಂಎ ಮುಗಿಸಿ ಅಲ್ಲಿಯೇ ಉಪನ್ಯಾಸಕರಾದ ಅವರಿಗೆ ಈ ಬಗ್ಗೆ  ಮಾಹಿತಿ ಇರಲಿಲ್ಲವೋ,ಅಥವಾ ಇವರುಗಳು ಸರಿಯಾದ ಕಾರಣ ಕೊಟ್ಟು ಪತ್ರ ಮೂಲಕ ವಿನಂತಿಸಿಲ್ಲವೋ ಏನೋ ನನಗೆ ಗೊತ್ತಿಲ್ಲ. ಇವರಿಬ್ಬರಿಗೆ ಇಂಟರ್ನಲ್ ಮಾರ್ಕ್ಸ್ ಕಡಿಮೆ ಬಂದದ್ದು ಹೌದು .ಆದರೆ ಅದಕ್ಕೆ ನಾನು ಕಾರಣ ಹೇಗಾಗುತ್ತೇನೆ ?  ಇದು ಯಾರಿಗಾದರೂ ಅರ್ಥ ಆಗುವ ವಿಚಾರ..ಆಗೇನೋ ಇವರುಗಳು ವಿದ್ಯಾರ್ಥಿಗಳು,  ಆ ಅನನುಭವಿ ಉಪನ್ಯಾಸಕರು  ತನ್ನ ತಪ್ಪನ್ನು ಮುಚ್ಚಿಡಲು ನನ್ನ ಮೇಲೆ ಹಾಕಿದ್ದು ಇವರಿಗೆ ಆಗ ಅರ್ಥ ಆಗಿರಲಾರದು ಸರಿ.ಈಗ ಶಿಕ್ಷಕಿಯಾಗಿ ಇರುವ ಇವರಿಗೆ ಅರ್ಥವಾಗದೆ ಇದ್ದರೆ ಹೇಗೆ? ಅವರಿಗೆ ಅಂಕ ಕಡಿಮೆ ಬರಲು ನಾನು ಕಾರಣ ಎಂದು ಇಂದಿಗೂ ನಂಬಿದರೆ ಹೇಗೆ? ಎಲ್ಲಾದರೂ ಓರ್ವ  ವಿದ್ಯಾರ್ಥಿಯ  ಮಾತಿನಂತೆ ಇತರರಿಗೆ ಅಂಕಗಳನ್ನು ಕೊಡುವ ಪದ್ಧತಿ ಇದೆಯಾ ? ಈಗಲಾದರೂ ಇದು ಅರ್ಥವಾಗದೆ ಸುಮ್ಮನೇ ಕೊರಗಿದರೆ ಅದಕ್ಕೆ ನಾನು ಹೊಣೆಯಲ್ಲ.

‌ಡಾ.ಕೆ ನಾರಾಯಣ ಭಟ್ ಮತ್ತು ಡಾ.ಜಿಎನ್ ಭಟ್ ಬಿಟ್ಟು ಉಳಿದ ಉಪನ್ಯಾಸಕರಿಗೆ ನಾನು ನಾಗರಾಜ್ ಅವರು ನೀಡಿದ ಇಂಟರ್ನಲ್ ಮಾರ್ಕ್ಸ್ ಅನ್ನು ಪ್ರಶ್ನಿಸಿದ್ದು,ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬರಲು ನಾನು ಕಾರಣ ಎಂದು ಹೇಳಿದ್ದಕ್ಕೆ ಅವರ ಮೇಲೆ ಪ್ರಾಂಶುಪಾಲರಿಗೆ ದೂರು ಕೊಟ್ಟದ್ದು ಬಹಳ ಉದ್ಧಟತನ ಎನಿಸಿತ್ತು.ಹಾಗಾಗಿ ಎಂಎ  ಎರಡನೇ ವರ್ಷ ನನ್ನನ್ನು ಎಲ್ಲ ಪಠ್ಯೇತರ ಚಟುವಟಿಕೆಗಳಿಂದ ಹೊರಗಿಟ್ಟರು.ಎಂಎ ವಿದ್ಯಾರ್ಥಿಗಳಿಂದ ಒಂದು ಗಂಟೆಯ ರೇಡಿಯೋ ಪ್ರೋಗ್ರಾಂ ಕೊಟ್ಟಾಗ ಅದರಲ್ಲಿ ನಾನು ಬಿಟ್ಟು ಉಳಿದ ಎಲ್ಲರೂ ಇದ್ದರು. ಆಗ ನನಗೂ ತುಂಬಾ ಪಂಥ ಬಂತು.ನಾನು ಏಳನೇ ತರಗತಿಯಲ್ಲಿ ಇದ್ದಾಗ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚಿಸಿ ನಿರ್ದೇಶಿಸಿ ತಂಡ ಕಟ್ಟಿ ಅಭಿನಯಿಸಿ ಬಹುಮಾನ ಪಡೆದಿದ್ದೆ.ನಂತರ ಮೊದಲ ಬಿಎಸ್ಸಿ ಓದುತ್ತಿರುವಾಗ ಸುಮನ್ ಎಂಬ ನನ್ನ ಮೆಸ್ ಮೇಟ್ ಹುಡುಗಿಯ ಪ್ರೇರಣೆಯಿಂದ ನಾನು ಕಥೆ ಕವಿತೆಗಳನ್ನು ಬರೆಯುತ್ತಿದ್ದೆ.ಈಗ ನನ್ನನ್ನು ಬಿಟ್ಟು ಆಕಾಶವಾಣಿಗೆ ಇವರುಗಳು ಕಾರ್ಯಕ್ರಮ ಕೊಟ್ಟದ್ದು ನನಗೆ ಬರವಣಿಗೆಗೆ ಪ್ರೇರಣೆ ಆಯಿತು.ತಕ್ಷಣವೇ ಒಂದು ಕಥೆಯನ್ನು ಬರೆದು ಆಕಾಶವಾಣಿ ಮಂಗಳೂರಿಗೆ ಕಳುಹಿಸಿದೆ .ಒಂದು ವಾರದಲ್ಲೇ ನನಗೆ ಆಕಾಶವಾಣಿಯಿಂದ ಬರುವಂತೆ ಪತ್ರ ಬಂತು.ಹೋಗಿ ಓದಿದೆ.ಇವರು ನೀಡೀದ ಕಾರ್ಯ ಕ್ರಮ ಪ್ರಸಾರ ಆಗುವ ಮೊದಲು ನನ್ನ ಕಥೆ ಪ್ರಸಾರ ಆಯಿತು, ಇನ್ನೂರು ರು ದುಡ್ಡು ಕೂಡ ನನಗೆ ಸಿಕ್ಕಿತು. ಅಲ್ಲಿಂದ ತಿರುಗಿ ನೋಡಲೇ ಇಲ್ಲ, ನಿರಂತರ ಬರೆಯಲು ಶುರು ಮಾಡಿದೆ ಆಕಾಶವಾಣಿ  ಮಂಗಳೂರಿನಲ್ಲಿ ನನ್ನ ಅನೇಕ ಕಥೆಗಳು,ಭಾಷಣಗಳು ಪ್ರಸಾರವಾದವು .ಇವರುಗಳು ಉದ್ದೇಶ ಪೂರ್ವಕವಾಗಿ ಮಾಡಿದ ಅವಮಾನ ನನ್ನನ್ನು ಲೇಖಕಿಯಾಗಿ ಮಾಡಿತು ಇವಿಷ್ಟು ನಡೆದ ವಿಚಾರಗಳನ್ನು ಇದ್ದುದು ಇದ್ದ ಹಾಗೆ ಹೆಸರು ಹಾಕಿ ಬರೆದಿರುವೆ.ಬೇಕಾದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು.ಅದರೆ ನನ್ನದಲ್ಲದ ತಪ್ಪಿಗೆ ನಾನು ಹೊಣೆಯಾಗಲಾರೆ ಖಂಡಿತಾ


https://shikshanaloka.blogspot.com/2019/04/5.html?m=1

Wednesday 13 March 2024

ಕರಾವಳಿಯ ಸಾವಿರದೊಂದು ದೈವಗಳು


 


#ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


-ನಾಗೇಶ್ ಪೂಜಾರಿ,ವಸಾಯಿ ಪಾಲ್ಘರ್ ಮಹಾರಾಷ್ಟ್ರ

*ಡಾ. ಲಕ್ಷ್ಮಿ ಜಿ ಪ್ರಸಾದ್* ಅವರು ಬರೆದ


ಕೊಡಗು, ಕಾರವಾರದಿಂದ  ಕೊಟ್ಟಯಂವರೆಗಿನ ತುಳು, ಕನ್ನಡ, ಮಲಯಾಳ, ಕೊಡವ ಪರಿಸರದ ಸಾವಿರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಗ್ರಂಥ

*ಕರಾವಳಿಯ ಸಾವಿರದೊಂದು ದೈವಗಳು* ಪುಸ್ತಕ ಓದಿದೆ...... ಓದುತ್ತಾ ಓದುತ್ತಾ ಹೋಗುತ್ತಿರುವಾಗ ಬಹಳಷ್ಟು ವಿಸ್ಮಯ ವಿಚಾರಗಳು ತಿಳಿಯಿತು.....ರೋಮಾಂಚನ ವಾಯಿತು.......ತುಂಬಾ ತುಂಬಾ ಧನ್ಯವಾದಗಳು.....🙏🙏


ನಾಗೇಶ್ ಪೂಜಾರಿ

Vasai, Palghar, Maharashtra.


ಧನ್ಯವಾದಗಳು ಸರ್ ನಿಮಗೆ 🙏

Sunday 18 February 2024

ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥ- ವೆಂಕಪ್ಪ ಬಂಗೇರ

 




ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥ- ವೆಂಕಪ್ಪ ಬಂಗೇರ 


"ಕರಾವಳಿಯ ಸಾವಿರದೊಂದು ದೈವಗಳು"

ಡಾ. ಲಕ್ಷ್ಮೀ ಜಿ.ಪ್ರಸಾದ್ Lakshmi V  ಎಂಬ ಜನಪದ ವಿದುಷಿ ಬರೆದ ಒಂದು ಬೃಹದ್ ಗ್ರಂಥ. ಇದರಲ್ಲಿ ಸಾವಿರಾರು ದೈವಗಳ ಬಗ್ಗೆ ಅದ್ಭುತ ವಿವರಣೆಗಳು ಇವೆ.

ಮಾಯವಾಗುವುದು ಎಂದರೇನು? ಎಂಬುದಕ್ಕೆ ವೈಜ್ಞಾನಿಕ  (ಬ್ರಹ್ಮಾಂಡ ವಿಜ್ಞಾನ) ವಿವರಣೆ ನೀಡಿರುವುದು ಅದ್ಭುತವಾಗಿದೆ. ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥವಾಗಿದೆ. 

ಸಾವಿರಪುಟಗಳ ಸುಂದರ ಅದ್ಭುತ ವಿಮರ್ಶಾತ್ಮಕ ಗ್ರಂಥವಿದು. ದೈವ ಎಂಬುದು ಬರಿ ಕಾಲ್ಪನಿಕ ಕಥೆಗಳು ಅಲ್ಲ!! ಅದರ ಹಿಂದೆ ಸತ್ಯವಿದೆ, ವಿಸ್ಮಯವಿದೆ. ದೈವಗಳು ಸತ್ಯವೆಂದು ಅರಿವಾದರೆ ಪರಮಾತ್ಮನು ಕೂಡ ಸತ್ಯವೆಂದು ತಿಳಿಯುತ್ತದೆ. ಇಂದಿನ ಯುಗದಲ್ಲಿ ಆಸ್ತಿಕತೆಯನ್ನು ಹರಡುವುದು ಧರ್ಮಕಾರ್ಯವಾಗಿದೆ. ತಮ್ಮ ತನುಮನಧನಗಳ ತ್ಯಾಗ ಮಾಡಿ ಲೇಖಕಿಯವರು ಈ ಗ್ರಂಥವನ್ನು ರಚಿಸಿದ್ದಾರೆ. ಇದು ದೈವ ದೇವರ ಅನುಗ್ರಹದಿಂದ ಮೂಡಿಬಂದಿದೆ ಎಂದು ಇದನ್ನು ಓದುವಾಗ ತಿಳಿಯುತ್ತದೆ.

@ಅನುಸರಿಸುವರು Highlight ಮಾತೃಶ್ರೀ ಪ್ರಕಾಶನ ಪ್ರಕಾಶನ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾ


ದ್

Saturday 17 February 2024

ಭೂತಾರಾಧನೆ ದೈವಾರಾಧನೆಗೆ ಅಪಚಾರ ಆಗುತ್ತಿದೆಯೇ? ಡಾ.ಲಕ್ಷ್ಮೀ ಜಿ ಪ್ರಸಾದ


 ಭೂತಾರಾಧನೆ/ ದೈವಾರಾಧನೆಗೆ  ಅಪಚಾರ ಆಗುತ್ತಿದೆಯೇ?

ಡಾ.ಲಕ್ಷ್ಮೀ ಜಿ ಪ್ರಸಾದ 

ಮೊದಲಿಗೆ ದೈವವನ್ನು ಕಾಡಿನ ಮರದ ಕೆಳಗೆ ಕಲ್ಲು ಹಾಕಿ ನಂಬುತ್ತಿದ್ದರು.ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಕೋಲ ಕಟ್ಟಿ ಆರಾಧನೆ ಮಾಡುತ್ತಿದ್ದರು

ದೈವಗಳಿಗೆ ಮೂರ್ತ ರೂಪ/ ಮೂರ್ತಿಗಳು ಇರಲಿಲ್ಲ

ಈಗ ಊರು ನಡುವೆ ಮನೆ ಮುಂದೆ ಕೂಡ ದೈವಸ್ಥಾನಗಳ ನಿರ್ಮಾಣ ಆಗಿದೆ, ಮೂರ್ತಿಗಳ ಪ್ರತಿಷ್ಠಾಪನೆ ಕೂಡ ಆಗಿದೆ 


ಮೊದಲು ರಾತ್ರಿ ಮಾತ್ರ ಕೋಲ ಆಗುತ್ತಿತ್ತು,ಈಗ ನಡು ಮಧ್ಯಾಹ್ನ ಕೂಡ ಆಗುತ್ತಿದೆ


ಮೊದಲು ಅಡಿಕೆ ಹಾಳೆಯ ಮೊಗವನ್ನು ಸ್ಥಳದಲ್ಲಿಯೇ ತಯಾರು ಮಾಡಿ ಬಳಸುತ್ತಿದ್ದರು.ಕೇಪುಳ ಹೂ, ಪಾದೆ ಹೂವಿನಂತಹ ಕಾಡಿನಲ್ಲಿ ಸಿಗುವ ಹೂಗಳನ್ನು ಬಳಸುತ್ತಿದ್ದರು.ಆರತಿ ಮಾಡುವ ಪದ್ಧತಿ ಇರಲಿಲ್ಲ ಧೂಪ ಕರ್ಪೂರ ದ ಬಳಕೆ ಇರಲಿಲ್ಲ.ತೆಂಬರೆ ಹೊರತಾಗಿ ಬೇರೆ ವಾದ್ಯಗಳ ಬಳಕೆ ಇರಲಿಲ್ಲ .

ಸಂಪೂರ್ಣವಾಗಿ ತೆಂಗಿನ ತಿರಿಯ ಅಲಂಕಾರ ಇರುತ್ತಿತ್ತು.

ಆಯಾಯ ದೈವಗಳಿಗೆ ಅವರದ್ದೇ ಆದ ಮುಖವರ್ಣಿಕೆ ಇತ್ತು

ಯಕ್ಷಗಾನದ ನಾಟಕದ ದೇವ ದೇವತೆಗಳಂತೆ ವೇಷ ಭೂಷಣಗಳನ್ನು ಧರಿಸುತ್ತಿರಲಿಲ್ಲ.


ಈಗ ಕೆಲವು ದೈವಗಳ ಫೋಟೋ ನೋಡುವಾಗ ದೈವವಾ? ಯಕ್ಷಗಾನ/ ನಾಟಕದ ದೇವತೆಗಳು ಪಾತ್ರಗಳಾ ಎಂದು ತಿಳಿಯದಾಗಿದೆ . ಮೊದಲು ದೈವಗಳನ್ನು ಶಿವನ ಅಥವಾ ವಿಷ್ಣು ವಿನ ಅವತಾರ ಎಂದೋ ಅಂಶ ಎಂದೋ ಹೇಳುತ್ತಿರಲಿಲ್ಲ..ಈಗ ಎಲ್ಲ ದೈವಗಳೂ ಪುರಾಣ ದೇವತೆಗಳಾಗಿವೆ.ಉದಾ ತನ್ನಿ ಮಾನಿಗ ಆದಿ ಮಾಯೆಯಾಗಿ ಕೊರತಿ ಪಾರ್ವತಿ ದೇವಿಯಾಗಿ, ಉಳ್ಳಾಲ್ತಿ ದುರ್ಗೆಯ ಆಗಿ,ಪಿಲಿ ಭೂತ ವ್ಯಾಘ್ರ ಚಾಮುಂಡಿ ಯಾಗಿ, ಚಾಮುಂಡೇಶ್ವರಿ ಆಗಿ ಬೆರ್ಮೆರ್ ಬ್ರಹ್ಮ ಲಿಂಗೇಶ್ವರ ಆಗಿ ಸಮೀಕರಣಗೊಂಡಿದ್ದಾರೆ

ಇಲ್ಲಿ ಅವತಾರದ ಪರಿಕಲ್ಪನೆಯೇ ಇರಲಿಲ್ಲ..ಈಗ ಎಲ್ಲ ದೈವಗಳೂ ಅವತಾರ ಎತ್ತಿದ ಪುರಾಣ ದೇವತೆಗಳೇ ಆಗಿದ್ದಾರೆ. 

ಕಾಡಿನ ಮರದ ಅಡಿಯಲ್ಲಿ ಕಲ್ಲು ಹಾಕಿ ಆರಾಧಿಸಲ್ಪಡುತ್ತಿದ್ದ ದೈವಗಳಿಗೆ ಭವ್ಯವಾದ ಮಂದಿರಗಳು ನಿರ್ಮಾಣ ಆಗಿ  ಬ್ರಹ್ಮ ಕಲಶ ವೇದೋಕ್ತ ಹೋಮ ಹವನಗಳು ಸತ್ಯನಾರಾಯಣ ಪೂಜೆಗಳು ಆಗುತ್ತಿವೆ 


ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ ? 

ಈಗ ಅನೇಕ ಕಡೆ ದೈವಗಳು ಯಕ್ಷಗಾನ ಬಯಲಾಟದ ವೇಷಗಳಂತೆ ಕಾಣಿಸುತ್ತವೆ.ಪಾಡ್ದನಗಳನ್ನು ಹಾಡಲು ತಿಳಿದವರು ಸಂಖ್ಯೆ ತೀರಾ ಕಡಿಮೆ ಆಗಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ ತಿಳಿದಿದ್ದಾರೆ

ಮೊದಲು ಪಾಡ್ದನ ಹಾಡುತ್ತಾ ಕುಣಿಯುತ್ತಿದ್ದರು ಸಿನಿಮಾ ಅಥವಾ ಇತರೆ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತಿರಲಿಲ್ಲ

ಈಗ ವಾದ್ಯಗಳಿಲ್ಲದೆ ಕೋಲವೇ ನಡೆಯುವುದಿಲ್ಲ.

ಸಾವಿರದೊಂದು ದೈವಗಳ ಕೋಲದಲ್ಲಿ ಪಾಡ್ದನ ಬಿಡಿ ಹತ್ತು ದೈವಗಳ ಹೆಸರನ್ನು ಕೂಡ ಹೇಳದೆಯೇ ಅರ್ಧ ಗಂಟೆಯಲ್ಲಿ ಮುಗಿಸುತ್ತಾರೆ.ಹತ್ತುದೈವಗಳ ಹೆಸರು ಕೂಡ ದೈವ ಕಟ್ಟುವವರಿಗಾಗಲೀ,ಮನೆಯವರಿಗೆ ಆಗಲೀ ಗೊತ್ತಿರುವುದಿಲ್ಲ 


ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ? ತಿಳಿದವರು ಹೇಳಬೇಕು


ಇನ್ನು ದೈವಗಳು ಯಾರೊಬ್ಬರ ಸೊತ್ತಲ್ಲ.ದೈವಗಳ ಕಥೆಯನ್ನು ದೈವಗಳ ಪಾತ್ರವನ್ನು ಸಿನಿಮಾ,ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ತೋರಿಸಬಾರದು ಎನ್ನುವುದು ಸರಿಯಲ್ಲ.. ದೈವಗಳನ್ನು ಕೆಟ್ಟದಾಗಿ ತೋರಿಸಿ ಅವಹೇಳನ ಮಾಡಬಾರದು ಎಂದರೆ ಒಪ್ಪಿಕೊಳ್ಳಲೇ ಬೇಕಾದ ಮಾತು


ಮೊದಲು ಭಾಷಿಕವಾಗಿ ಮತ್ತು ಭೌಗೋಳಿಕವಾಗಿ ತುಳುನಾಡು ದ್ವೀಪ ಸದೃಶವಾಗಿತ್ತು.ಹಾಗಾಗಿ ಇಲ್ಲಿನ ದೈವದ ಆರಾಧನೆ ಹೊರಜಗತ್ತಿಗೆ ಹೆಚ್ಚು ತೆಗೆದುಕೊಂಡಿರಲಿಲ್ಲ

ಈಗ ಪರಿಚಯ ಆಗಿದೆ

ಹಾಗಾಗಿ ದೈವಗಳು ಪಾತ್ರವಾಗಿ ಇರುವ ಸಿನಿಮಾ, ಧಾರಾವಾಹಿಗಳು ಆರಂಭವಾಗಿವೆ

ಕಾಂತಾರ ಸಿನಿಮಾಕ್ಕೆ ಮೊದಲೇ ಅನೇಕ ಸಿನಿಮಾಗಳಲ್ಲಿ,ನಾಟಕ ಯಕ್ಷಗಾನ ಬಯಲಾಟಗಳಲ್ಲಿ ದೈವಗಳು ಪಾತ್ರಗಳು ಬಂದಿವೆ

ನಾನು ಪದವಿ ಓದುತ್ತಿದ್ದ ಕಾಲದಲ್ಲಿ ಎಂದರೆ ಮೂವತ್ತು ವರ್ಷಗಳ ಹಿಂದೆಯೇ ಛದ್ಮವೇಷ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಭೂತಕೋಲವನ್ನು ಮಾಡಿದ್ದರು.ಆಗ ಈಗಿನಂತೆ ಮೊಬೈಲ್,face book , WhatsApp ಗಳು ಇರಲಿಲ್ಲ

ವಿರೋಧವೂ ಬಂದಿರಲಿಲ್ಲ


ದೈವಗಳನ್ನು ಅವಹೇಳನಕಾರಿಯಾಗಿ ದೈವದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಧಾರಾವಾಹಿ, ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ದೈವಗಳ ಪಾತ್ರವನ್ನು ತಂದರೆ ಅದು ದೈವಾರಾಧನೆಗೆ ಹೇಗೆ ಅಪಚಾರ ಆಗುತ್ತದೆ? ಎಂದು ನನಗಂತೂ ಗೊತ್ತಾಗುತ್ತಿಲ್ಲ

ಇನ್ನು ಕಾಂತಾರ ಸಿನಿಮಾಕ್ಕೆ ಸಂಬಂಧಿಸಿದಂತೆ ಶಿವನ ತಾಯಿ ಕೆಟ್ಟ ಪದಗಳನ್ನು ಬಳಸಿ ಬೈದಿದ್ದಾರೆ,ಹಿಡಿಸೂಡಿಯಲ್ಲಿ ಹೊಡೆದಿದ್ದಾರೆ.ದೈವ ಕಟ್ಟುವವರಿಗೆ ಹೀಗೆ ಮಾಡುವಂತಿಲ್ಲ‌ಇದು ಅಪಚಾರ ಎಂದು ದಯಾನಂದ ಕತ್ತಲಸಾರ್ ಹೇಳಿದ್ದು ನೋಡಿದೆ

ಕಾಂತಾರ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ ರಿಷಭ್ ಶೆಟ್ಟಿಯವರು ದೈವವನ್ನು ಕಟ್ಟಿಲ್ಲ.ದೈವದ ಅಭಿನಯ ಮಾತ್ರ ಮಾಡಿದ್ದು.ಸಿನೇಮದ ಕಥೆಯಲ್ಲಿ ಕೂಡ ಶಿವ  ಬೇಜವಾಬ್ದಾರಿಯಿಂದ ಉಂಡಾಡಿ ಗುಂಡನಂತೆ ಇದ್ದಾಗ ತಾಯಿಯಿಂದ ಬೈಗುಳ ಪೆಟ್ಟು ತಿಂದಿರ್ತಾನೆ ,ಭೂತಕಟ್ಟಲು ದೀಕ್ಷೆ ಪಡೆದು ನಂತರವಲ್ಲ.ಹಾಗಾಗಿ ಇದು ಅರ್ಥ ರಹಿತ ಆರೋಪ.

ಕಾಂತಾರ ಸಿನಿಮಾದಲ್ಲಿ ಎಲ್ಲೂ  ದೈವಾರಾಧನೆಗೆ ಅಪಚಾರವಾಗಿಲ್ಲ.ಹಾಗಿರುವಾಗ ಕಾಂತಾರ ಫ್ರೀಕ್ವೆಲ್ ನಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎನ್ನುವುದು ಸರಿಯಲ್ಲ..

ಭೂತಕೋಲದಲ್ಲಿ ಕೂಡ ಆಯಾಯ ದೈವಗಳ ಅಭಿನಯ ಇದೆ.ಇದೊಂದು ಧಾರ್ಮಿಕ ರಂಗಭೂಮಿ ಕೂಡ

ಇದನ್ನು  ಇತರ ಮಾಧ್ಯಮಗಳಲ್ಲಿ ಬಳಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ..ದೈವಗಳ ಪಾವಿತ್ರ್ಯಕ್ಕೆ, ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಬಹುದು.ಒಂದೊಮ್ಮೆ ದೈವಗಳು ಅವಹೇಳನ ಇದ್ದರೆ ವಿರೋಧಿಸಬಹು ಅಷ್ಟೇ..ಅದು ಬಿಟ್ಟು ಮಾಡಬಾರದು ಎಂದು ತಾಕೀತು ಮಾಡುವ ಹಕ್ಕು ಯಾರಿಗೂ ಇಲ್ಲ.. ಅದನ್ನು ಕೇಳುವವರೂ ಇರಲಾರರು

ಇನ್ನು ವಿತ್ತಂಡ ವಾದ ಮಾಡುವುದಾದರೆ ದೈವ ಕಟ್ಟುವವರು ಇತರ ಕೆಲಸ ಮಾಡುವುದು ಸರಿಯಲ್ಲ.. ಅಲ್ಲಿ ಮೇಲಧಿಕಾರಿಗಳು ಬೈಯುದಿಲ್ಲವೇ? ಎನ್ನಬಹುದು ಅದೇ ರೀತಿಯಲ್ಲಿ ಮೈಕ್ ಹಿಡಿದು ಭಾಷಣ ಮಾಡುವುದೂ ಸರಿಯಲ್ಲ.ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರಾಗಿ ಅಧಿಕಾರ ಪಡೆಯುವುದು ಸರಿಯಲ್ಲ.ಎಂಎಲ್ಎ ಟಿಕೆಟ್ ಗಾಗಿ ಯಾರ್ಯಾರದೋ ಕೈಕಾಲು ಹಿಡಿಯುವುದು ಕೂಡ ಸರಿಯಲ್ಲ  ಉಗ್ರರಂತೆ ತುಳು ರಾಜ್ಯಕ್ಕಾಗಿ ಅಲ್ಲಲ್ಲಿ ಬಾಂಬ್ ಹಾಕಬೇಕು ಬೆಂಕಿ ಹಾಕಬೇಕು ಎಂದವರು ದೈವ ಕಟ್ಟುವುದೂ ಕೂಡ ಸರಿಯಲ್ಲ  ಎಂದು ವಿತ್ತಂಡ ವಾದ ಮಾಡಬಹುದು


ಈ ಹಿಂದೆ 2016 ರಲ್ಲಿ  ಹಿರಿಯರಾದ ಎಚ್ ಡಿ ಎಲ್ ರಾಯರು ದೈವಗಳ ಅಣಿ ಅರದಳ ವೇಷ ಭೂಷಣಗಳ ಸಾಕ್ಷ್ಯ ಚಿತ್ರ ಮಾಡಿ ಕಾರ್ಯಾಗಾರ ಮಾಡಿ ಪುಸ್ತಕ ಪ್ರಕಟಿಸಲು ಹೊರಟಾಗ ಕೂಡ ತೀವ್ರ ವಿರೋಧ ಬಂದಿತ್ತು.ಅವರದನ್ನೆಲ್ಲ ಲೆಕ್ಕಿಸದೆ ಕಾರ್ಯಾಗಾರ ಮಾಡಿ ಭೂತಾರಾಧನೆಯ ಅಣಿ ವೈವಿಧ್ಯಗಳ ,ವೇಷ ಭೂಷಣ ಗಳು ವಿವಿಧ ರೀತಿಯ ಮುಖ ವರ್ಣಿಕೆಗಳನ್ನು ಹಾಕಿಸಿ ಫೋಟೋ ತೆಗೆದು ದಾಖಲಿಸಿ ಪ್ರಕಟಿಸಿದೆ ಗ್ರಂಥ ಅಣಿ ಅರದಳ ಸಿರಿ ಸಿಂಗಾರ ಈಗ ಭೂತಾರಾಧನೆಯ ಪರಿಕರಗಳು ಕುರಿತಾಗಿ ಸಚಿತ್ರ ಮಾಹಿತಿ ಇರುವ ರೆಫರೆನ್ಸ್ ಗ್ರಂಥವಾಗಿದೆ


ಇದು ಹೀಗೆಯೇ ಮುಂದುವರೆದರೆ ದೈವಗಳ ಕೋಲದ ವೀಡಿಯೊ ಮಾಡಬಾರದು, ಫೋಟೋ ತೆಗೆಯಬಾರದು, ಭೂತ ಕಟ್ಟುವವರ ಹೊರತಾಗಿ ಇತರರು ಅಧ್ಯಯನ ಮಾಡಬಾರದು,ಪುಸ್ತಕ ಬರೆಯಬಾರದು, ಉಪನ್ಯಾಸ ನೀಡಬಾರದು, ಕೊನೆಗೆ ಹೊರಗಿನವರು ನೋಡಲೂ ಬಾರದು ಎಂದು ಹೇಳಿಯಾರು..


ಡಾ.ಲಕ್ಷ್ಮೀ ಜಿ ಪ್ರಸಾದ

Tuesday 13 February 2024

ಆತ್ಮ ಕಥೆಯ ಬಿಡಿ ಭಾಗಗಳು: ಆಲದ ಮರಗಳು ಇತರ ಗಿಡಗಳನ್ನು ತೊಳೆಯಲು ಬಿಡುವುದಿಲ್ಲ

 ರೇಡಿಯೋ ದಿನಾಚರಣೆಯ ಶುಭಾಶಯಗಳು.


ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.


ನನ್ನ ಬರವಣಿಗೆಯ ಆರಂಭಿಕ ದಿನಗಳಲ್ಲಿ ನನ್ನ ಬರವಣಿಗೆಯ ಅಭಿವ್ಯಕ್ತಿಗೆ ರೇಡಿಯೋ ಸಹಾಯ ಮಾಡಿದೆ‌..

 ಮಂಗಳೂರು ಆಕಾಶವಾಣಿಯಲ್ಲಿ ನನ್ನ ಮೂರು ನಾಲ್ಕು ಭಾಷಣಗಳು,ಐದಾರು ಕಥೆಗಳು ಪ್ರಸಾರವಾಗಿವೆ‌.

ಸಾರಂಗ್ ರೇಡಿಯೋ ಮೂಲಕ ನನಗೆ ತುಂಬಾ ಹತ್ತಿರವಾದವರು ವಿಕೆ ಕಡಬ .

ನನ್ನ ಬಗ್ಗೆ ಸಂದರ್ಶನ ಮಾಡಿ ನನಗೊಂದು ಅಸ್ತಿತ್ವವನ್ನು ಕಟ್ಟಿಕೊಟ್ಟವರು ವಿಕೆ ಕಡಬ

ಇನ್ನೊಂದು ಗಮ್ಮತ್ತಿದ ವಿಚಾರ ಹೇಳ್ತೇನೆ 

ಬಹುಶಃ 1997 ಜನವರಿ ಪೆಬ್ರವರಿ ಇರಬಹುದು.

ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ ‌.ಸಮಯ ಸಿಕ್ಕಾಗೆಲ್ಲ‌ ಅಲ್ಲಲ್ಲಿ  ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಿದ್ದೆ‌.

ಒಂದಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶಿಕಾರಿ ಪುರ ಕೃಷ್ಣ ಮೂರ್ತಿಯವರು ನಾನು ನಡೆಸುವ ಸಂಭಾಷಣಾ ಶಿಬಿರದ ಪಾಠಗಳ ಪಠ್ಯವನ್ನು ವಿಭಜಿಸಿ ಅರ್ಧ ಗಂಟೆಯ 52 ವಿಭಾಗಗಳನ್ನಾಗಿ ಮಾಡಿಕೊಡಲು ಹೇಳಿದರು‌.ಆಕಾಶವಾಣಿಗೆ ಬೇಕು ಎಂದರು ‌.ಸರಿ ಎಂದು ಎರಡು ಮೂರು ದಿನ ಕುಳಿತು 52 ಕಂತು ಅರ್ಧ ಗಂಟೆಗಾಗುವಷ್ಟು ಸಂಭಾಷಣೆ ಬರೆದು ಕೊಟ್ಟೆ.

ಇದಾಗಿ ಒಂದು ಮೂರು ನಾಲ್ಕು ತಿಂಗಳ ನಂತರ ಆಕಾಶವಾಣಿಯಲ್ಲಿ ಒಂದು ದಿನದ  ಸಂಸ್ಕೃತ ಪಾಠ ಮಾಡುವಂತೆ ಆಹ್ವಾನಿಸಿ ನನಗೆ ಪತ್ರ ಬಂದು ಪಾಠ .ಯಾವ ಅಂಶವನ್ನು ಹೊಂದಿರಬೇಕು ಎಂದು ಕೂಡ ತಿಳಿಸಿದ್ದರು.

ನಾನು ಇಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮಾದರಿಯಲ್ಲಿ ಬರೆದು ಅಭ್ಯಾಸ ಮಾಡಿಸಿ ರೆಕಾರ್ಡಿಂಗ್ ಗೆ ಹೋದೆ.

ಅಲ್ಲಿ ಶರಭೇಂದ್ರ ಸ್ವಾಮಿಯವರಲ್ಲಿ ಮಾತಿನ ನಡುವೆ ರೇಡಿಯೋ ಸಂಸ್ಕೃತ ಪಾಠದ ಪಠ್ಯವನ್ನು ನಾನು ತಯಾರಿಸಿ ಕೊಟ್ಟ ಬಗ್ಗೆ ಹೇಳಿದೆ.ಆಗ ನೋಡಬೇಕಿತ್ತು ಅವರ ಮುಖದಲ್ಲಿ ನನ್ನ ಬಗೆಗಿನ ಅಪನಂಬಿಕೆ..ನನ್ನನ್ನು ವಿಚಿತ್ರವಾಗಿ  ನೋಡುತ್ತಾ 

ಶಿಕಾರಿಪುರ ಕೃಷ್ಣ ಮೂರ್ತಿ,ಜಿ ಎನ್ ಭಟ್ ಮೊದಲಾದವರೆಲ್ಲ ಸೇರಿ ತಯಾರಿಸಿದ ಪಠ್ಯ ಇದು ಎಂದರು‌.

ಆಗ ಪಠ್ಯ ತಯಾರಿಸಿದ ನನ್ನ ಬಗ್ಗೆ ಒಂದಕ್ಷರವನ್ನು ಕೂಡ ಹೇಳದೆ ದೊಡ್ಡವರು ಅದರ ಕ್ರೆಡಿಟ್‌ ಅನ್ನು ತಾವೇ ಪಡೆದುಕೊಂಡಿದ್ದಾರೆ ಎಂದು ನನಗೆ ಅರ್ಥವಾಯಿತು.

ನಮ್ಮ ಬಗ್ಗೆ ಗೌರವ ಇಲ್ಲದ ಕಡೆ ತಿರುಗಿ ಕೂಡ ನೋಡದೆ ಇರುವ ಸ್ವಭಾವ ನನ್ನದು.ಹಾಗಾಗಿ ನಂತರ ಆಕಾಶವಾಣಿಗೆ ಬರೆಯುವುದನ್ನು ಬಿಟ್ಟು ಪತ್ರಿಕೆಗಳಿಗೆ ಬರೆಯಲಾರಂಭಿಸಿದೆ.ನಂತರ ಹಿಂತಿರುಗಿ ನೋಡಬೇಕಾದ ಸಂದರ್ಭ ಬರಲಿಲ್ಲ. ಇದಾಗಿ‌ ಸುಮಾರು ಇಪ್ಪತ್ತು ವರ್ಷಗಳ ನಂತರ ಡಾ.ಸದಾನಂದ ಪೆರ್ಲ ಅವರು ಕುವೆಂಪು ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ ಬಗ್ಗೆ ಆಕಾಶವಾಣಿಯಲ್ಲಿ ಮಾತನಾಡಲು ಕರೆದರು.ಆಗ ಹೋಗಿದ್ದೆ.ಅದಾದ ನಂತರ ಆ ಕಡೆ ಹೋಗಿಲ್ಲ.

ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.

ಅಂದಿನಿಂದ ಇಂದಿನವರೆಗೂ ಅದೇ ಕಥೆ..

ನನ್ನ ಬ್ಲಾಗ್ ಬರಹಗಳನ್ನು ಓದಿ ಅನೇಕ ದೊಡ್ಡ ವಿದ್ವಾಂಸರು ಭಾಷಣ ಮಾಡುತ್ತಾರೆ. ಅದರೆ ಅಪ್ಪಿತಪ್ಪಿಯೂ ಆ ಬಗ್ಗೆ ಮೊದಲ ಬಾರಿಗೆ ಅಧ್ಯಯನ ಮಾಡಿ ಬರೆದ ನನ್ನ ಹೆಸರನ್ನು ಹೇಳುವುದಿಲ್ಲ ‌.ತಾವೇ ಅಧ್ಯಯನ ಮಾಡಿದವರಂತೆ ಮಾತನಾಡುತ್ತಾರೆ.

ಅಂದಿನಿಂದ ಇಂದಿನವರೆಗೂ ಅದೇ ಕಥೆ

ಉದಾಹರಣೆಗೆ ಇತ್ತೀಚೆಗೆ ಋತುಮಾನದಲ್ಲಿ ಡಾ.ಚಿನ್ನಪ್ಪ ಗೌಡರ ಸಂದರ್ಶನ  ನೋಡಿದೆ ‌ಅದರಲ್ಲಿ ಅವರು ತುಳುನಾಡಿನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಭೂತಗಳಿಗೆ ಆರಾಧನೆ ಇದೆ ‌.ಒಂದು ಸಾವಿರಕ್ಕಿಂತ ಹೆಚ್ಚು ದೈವಗಳ ಪಟ್ಟಿ ಮಾಡಲಾಗಿದೆ ಎಂದಿದ್ದಾರೆ. ನಾನು ಪಟ್ಟಿ ಮಾಡುವ ತನಕ ಇವರೆಲ್ಲರೂ ತುಳುನಾಡಿನಲ್ಲಿ ನಾನ್ನೂರಷ್ಟು  ದೈವಗಳಿಗೆ ಆರಾಧನೆ ಇದೆ ಎಂದು ಭಾಷಣ ಮಾಡುತ್ತಿದ್ದರು‌.ನಾನೇ ಕೇಳಿರುವೆ‌.ಹಲವಾರು ವರ್ಷಗಳ ಕಾಲ ಕಷ್ಟ ಪಟ್ಟು ನಾನು ಸಾವಿರಕ್ಕಿಂತ ಹೆಚ್ಚಿನ ದೈವಗಳ ಹೆಸರನ್ನು ಸಂಗ್ರಹ  ಪಟ್ಟಿಯನ್ನು ಮಾಡಿ ಅಣಿ ಅರದಳ ಸಿರಿ ಸಿಂಗಾರ ದಲ್ಲಿ  ಹಾಗು ಬ್ಲಾಗ್ ನಲ್ಲಿ ಹಾಕಿದ ನಂತರ ಇವರುಗಳು ಈಗ ಒಂದು ಸಾವಿರಕ್ಕಿಂತ ಹೆಚ್ಚು ದೈವಗಳಿಗೆ ಆರಾಧನೆ ಇದೆ ಎಂದು ಭಾಷಣ ಮಾಡುತ್ತಾರೆ ‌.ಆದರೆ ಆ ಪಟ್ಟಿಯನ್ನು ಮಾಡಿದವರ ಹೆಸರು ಹೇಳಲು ಹೋಗುವುದಿಲ್ಲ‌..ತಾವೇ ಮಾಡಿದವರಂತೆ ಪಟ್ಟಿ ಮಾಡಲಾಗಿದೆ ಎನ್ನುತ್ತಾರೆ...

Saturday 10 February 2024

ಕರಾವಳಿಯ ಸಾವಿರದೊಂದು ದೈವಗಳು - ರಘುಪತಿ ತ್ಹಾಮಣ್ಕರ




""ಡಾ. ಶ್ರೀಮತಿ ಲಕ್ಷ್ಮೀ ಪ್ರಸಾದ್ ರವರೆ.. 

ನೀವು ಬರೆದ ಕರಾವಳಿಯ ಸಾವಿರ ದೊಂದು ದೈವಗಳು ಎಂಬ ಬೃಹತ್  ಗ್ರಂಥ ತಲುಪಿದೆ.


.ನಮ್ಮ ಕರಾವಳಿಯ ಐತಿಹಾಸಿಕ ,ಸಾಂಸ್ಕೃತಿಕ ವಿಶ್ಲೇ ಷಣಾ ತ್ಮಕ  ನೋಟವುಳ್ಳ ದೈವಗಳ ಬಗ್ಗೆ  ಇನ್ನೂ  ಚಾಲ್ತಿ ಯಲ್ಲಿ ಇರುವ ಪ್ರಾಚೀನ ಸಂಸ್ಕೃತಿಯ ಅನಾವರಣ ಇಲ್ಲಿ ಇದೆ..ನಿಮ್ಮ ಸಂಶೋಧನಾ ಗ್ರಂಥಗಳ ಪಟ್ಟಿಯೇ ಈಗಲೇ 21 ದಾಟಿದ್ದು ಇನ್ನೂ ಐದು ಗ್ರಂಥಗಳ ರಚನೆಯಲ್ಲಿ 

ತೊಡಗಿದ್ದೀರೆಂದು ತಿಳಿಯಿತು . ಇವುಗಳೆಲ್ಲವನ್ನೂ ಇಂಗ್ಲಿಷ್ ಸಹಿತ ದೇಶದ ಎಲ್ಲಾ ಭಾಷೆ ಗಳಲ್ಲಿ ತರ್ಜುಮೆ ಯಾಗಿ ದೇಶದ ಹಾಗೂ ಪರದೇಶದ ಜನರೂ ಓದುವಂತೆ   ಆಗಲಿ ಎಂದು ಹಾರೈಸುವೆ .ನೀವು ಬರೆದ ಪುಸ್ತಕವನ್ನು ಪ್ರೀತಿಯಿಂದ ಎತ್ತಿಕೊಂಡ ಫೋಟೋ ವನ್ನು ಕಳುಹಿಸಿದ್ದೇನೆ.. 

- ರಘುಪತಿ ತಾಮ್ಹನ್ ಕರ್ ಮೈಸೂರು


 ಸ್ವತಃ ಲೇಖಕರೂ ಉತ್ತಮ ಗಾಯಕರೂ ಆಗಿರುವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರರಾದ ರಘುಪತಿ ತಾಮ್ಹನ್ ಕರ್ ಅವರು ಸದಾ ನನ್ನ ಅಧ್ಯಯನ ಮತ್ತು ಬರವಣಿಗೆಗೆ ಪ್ರೋತ್ಸಾಹ ಕೊಡುವವರು.


ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡು ಓದಿ ಶುಭ ಹಾರೈಸಿದ್ದಾರೆ 

 ಧನ್ಯವಾದಗಳು ಸರ್ Raghupathi Thamankar- ಡಾ.ಲಕ್ಷ್ಷೀ ಜಿ ಪ್ರಸಾದ 


Wednesday 31 January 2024

ಕರಾವಳಿಯ ಸಾವಿರದೊಂದು ದೈವಗಳು: ಜಿತೇಶ್

 "ಕರಾವಳಿಯ ಸಾವಿರದೊಂದು ದೈವಗಳು" ಪುಸ್ತಕದೊಂದಿಗೆ.

ಕರಾವಳಿಯ ಎಲ್ಲಾ ದೈವಗಳ ಚಿತ್ರ ಸಹಿತ ಮಾಹಿತಿಯ

ಅದ್ಭುತ ಹೊತ್ತಗೆಯಿದು..ಜ್ಞಾನ ಭಂಡಾರವಿದು

ಲೇಖಕರಾದ Lakshmi V ಅವರಿಗೆ ಧನ್ಯೋಸ್ಮಿ